ಬೆಂಗಳೂರು: ಆಫ್ರಿಕಾ ಪ್ರಜೆ ಅನುಮಾನಾಸ್ಪದ ಸಾವು ಪ್ರಕರಣ; ಸಿಐಡಿ ತನಿಖೆ ಚುರುಕು

Update: 2021-08-03 12:33 GMT

ಬೆಂಗಳೂರು, ಆ.3: ಮಾದಕ ವಸ್ತು ಆರೋಪ ಪ್ರಕರಣ ಸಂಬಂಧ ಬಂಧಿಸಲಾಗಿದ್ದ ಆಫ್ರಿಕಾದ ಕಾಂಗೋ ಪ್ರಜೆ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.

ಸಿಐಡಿಯ ಎಸ್ಪಿ ವೆಂಕಟೇಶ್ ಅವರ ನೇತೃತ್ವದ ಅಧಿಕಾರಿಗಳು ಕಾಂಗೋ ಪ್ರಜೆ ಜೋವಾ ಯಾನೆ ಜೋಯೆಲ್ ಶಿಂದಾನಿ(27)ನನ್ನು ಬಂಧಿಸಿದ ಜೆಸಿನಗರ ಪೊಲೀಸ್ ಠಾಣೆ ಹಾಗೂ ಚಿಕಿತ್ಸೆಗೆ ದಾಖಲಿಸಿದ ಚಿರಾಯು ಆಸ್ಪತ್ರೆಗೆ ಭೇಟಿ ನೀಡಿ ಸಾವಿನ ಕುರಿತ ಮಾಹಿತಿಯನ್ನು ಪಡೆದಿದ್ದಾರೆ.

ಇನ್ನು, ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಿದ ಬೆನ್ನಲ್ಲೇ ಠಾಣೆಗೆ ಧಾವಿಸಿದ ಸಿಐಡಿ ಅಧಿಕಾರಿಗಳು ಘಟನೆಯ ಮಾಹಿತಿಯನ್ನು ಕಲೆಹಾಕಿದರು. ಮತ್ತೊಂದೆಡೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನಿಯಮದ ಪ್ರಕಾರವೇ ಮೃತ ಕಾಂಗೋ ಪ್ರಜೆ ಜೋವಾ ಮರಣೋತ್ತರ ಪರೀಕ್ಷೆಯನ್ನು ಇಬ್ಬರು ವೈದ್ಯರು ಹಾಗೂ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆಸಲಾಗಿದ್ದು, ಅದರ ಮಾಹಿತಿಯನ್ನು ಸಿಐಡಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ.

ಏನಿದು ಪ್ರಕರಣ?: ಆ.1ರ ರಾತ್ರಿ ಮಾದಕ ದ್ರವ್ಯ ಸಾಗಾಟದ ಆರೋಪದ ಮೇಲೆ ಕಾಂಗೋ ಪ್ರಜೆ ಜೋವಾ ಯಾನೆ ಶಿಯೆಲ್ ಶಿಂದಾನಿ ಮಾಲು ಬಂಧಿಸಲಾಗಿತ್ತು. ಬಂಧನದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಹೋಗಿ ಕುಸಿದುಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.
ನಂತರ ಹೃದಯ ಸ್ತಂಭನದಿಂದಾಗಿ ಕಸ್ಟಡಿಯಲ್ಲಿ ನಿಧನರಾದರು ಎಂದು ಪೊಲೀಸರು ತಿಳಿಸಿದ್ದರು. ಆದರೆ ಇದು ಲಾಕಪ್ ಡೆತ್ ಪ್ರಕರಣ ಎಂದು ಪ್ರತಿಭಟನಾಕಾರರು ಆರೋಪಿಸಿ ಜೆಸಿ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News