ಅಕ್ರಮ ಮದ್ಯ ವಿರೋಧಿಸಿದ ಮಹಿಳೆಯರ ಮೇಲೆ ಹಾಕಿದ್ದ ಮೊಕದ್ದಮೆ ವಾಪಸ್ಸು ಪಡೆಯಲು ಆಗ್ರಹ

Update: 2021-08-03 13:34 GMT

ಬೆಂಗಳೂರು, ಆ.3: ಅಕ್ರಮ ಮದ್ಯ ನಿಷೇಧ ಮಾಡುವಂತೆ ಆಂದೋಲನ ಮಾಡುತ್ತಿದ್ದ ರಾಯಚೂರು ಜಿಲ್ಲೆಯ 68 ಮಂದಿ ಮುಗ್ಧ ಮಹಿಳೆಯರ ಮೇಲೆ ಸುಳ್ಳು ಕೇಸು ಹಾಕಿದ್ದು, ಈ ಕೇಸನ್ನು ಹಿಂಪಡೆಯಬೇಕೆಂದು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಡಾ. ಶಿವಕುಮಾರ ನಾಗರನವಿಲೆ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

ರಾಯಚೂರು ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ದಂಧೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಕಾರಣ ಇದರ ವಿರುದ್ಧ ಸಿಡಿದೆದ್ದ ಬಡ, ಕೂಲಿಕಾರ್ಮಿಕ ಮಹಿಳೆಯರು ನಿತ್ಯ ಮದ್ಯ ಸೇವಿಸಿ ತಮಗೆ ಕಿರುಕುಳ ನೀಡುತ್ತಿದ್ದ ಗಂಡಂದಿರ ಹಿಂಸೆ ತಾಳಲಾರದೆ ಮದ್ಯ ನಿಷೇಧ ಆಂದೋಲನ ಮುಖಾಂತರ ಹೋರಾಟ ನಡೆಸುತ್ತಿದ್ದರೂ ಅಕ್ರಮ ಮದ್ಯ ಮಾರಾಟ ನಿಂತಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ. 

ಅಕ್ರಮ ಮದ್ಯ ಮಾರಾಟವನ್ನು ತಡೆಯುವಂತೆ ಪ್ರತಿಭಟನೆ ನಡೆಸಿದ ಮಹಿಳೆಯರ ಮೇಲೆ ಸುಳ್ಳು ಕೇಸು ದಾಖಲೆ ಹಾಕಿ ಕಿರುಕುಳ ನೀಡುತ್ತಿರುವುದು ಸರಿಯಲ್ಲ. ಒಂದೊತ್ತು ಊಟಕ್ಕೂ ಕಷ್ಟ ಪಡುವ, ದಿನನಿತ್ಯ ದುಡಿದು ತಿನ್ನುವ ಮಹಿಳೆಯರ ಮನೆಗೆ ಹೋಗಿ ಅವರಿಗೆ ತೊಂದರೆ ಕೊಡುತ್ತಿರುವುದು ಸರಿಯಲ್ಲ ಎಂದು ಶಿವಕುಮಾರ್ ಖಂಡಿಸಿದ್ದಾರೆ.

ಮಹಿಳೆಯರ ಮೇಲೆ ಹಾಕಿರುವ ಕೇಸ್‍ನ್ನು ವಜಾ ಮಾಡಬೇಕೆಂದು ತಿಳಿಸಿರುವ ಅವರು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮದ್ಯಪಾನ ನಿಷೇಧ ಆಂದೋಲನ ಸಂಸ್ಥೆಯ ಮುಖ್ಯಸ್ಥರಾದ ಅನಂತ್, ವಕೀಲ ಜಿ.ಸಿ.ಯೋಗೀಶ್, ನವೀನ್ ಕುಮಾರ್ ಹಾಗೂ ಹೇಮಂತ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News