ದೇಶದ್ರೋಹ ಕಾನೂನು ರದ್ದುಗೊಳಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ನಾಗರಿಕ ಸಂಘಟನೆಗಳಿಂದ ಧರಣಿ

Update: 2021-08-03 15:22 GMT

ಬೆಂಗಳೂರು, ಆ.3: ಯುಎಪಿಎ ಮತ್ತು ದೇಶದ್ರೋಹ ಕಾನೂನುಗಳು ಸೇರಿದಂತೆ ಇನ್ನಿತರೆ ಕಠಿಣ ಕಾನೂನುಗಳನ್ನು ಕೇಂದ್ರ ಸರಕಾರ ರದ್ದುಗೊಳಿಸಬೇಕೆಂದು ಚಿಂತಕರು, ಪ್ರಗತಿಪರರು ಪ್ರತಿಭಟನೆ ನಡೆಸಿ, ಆಗ್ರಹಿಸಿದರು.

ಮಂಗಳವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಹೋರಾಟಗಾರರು, ಪ್ರಜಾಪ್ರಭುತ್ವದ ಉಳಿವಿಗಾಗಿ ರಾಷ್ಟ್ರೀಯಾಂದೋಲನ ನಡೆಸಿ, ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಭಾರತದ ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಫಾ.ಸ್ಟ್ಯಾನ್ ಸ್ವಾಮಿ ಅವರ ವಿರುದ್ಧ ಭಯೋತ್ಪಾದನೆಗೆ ಪ್ರಚೋದನೆ ನೀಡಿದ ಸುಳ್ಳು ಆರೋಪಗಳನ್ನು ಹೊರಿಸಿ ಸೆರೆಯಲ್ಲಿ ರಿಸಲಾಗಿತ್ತು. ಇದೇ ಕಾರಣದಿಂದಾಗಿ ಇತ್ತೀಚಿಗೆ ಅವರು ನಿಧನರಾದರು. ಈ ಕಾನೂನುಗಳು ಎಷ್ಟು ವಿಷಮಕಾರಿಯಾಗಿ ಬಳಿಸಿಕೊಳ್ಳಲಾಗುತ್ತಿದೆ ಎಂಬುದರ ವಿಚಾರವಾಗಿ ನಮ್ಮ ಆತ್ಮಸಾಕ್ಷಿಯನ್ನೇ ಅಲುಗಾಡಿಸಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.

ಈ ದೇಶದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅಪಾರ ಗೌರವ ಮತ್ತು ನಂಬಿಕೆ ಹೊಂದಿದ್ದ ಸ್ವಾಮಿ ತಮ್ಮ ಕೊನೆಯ ಉಸಿರಿರುವವರೆಗೂ ಎಲ್ಲ ರೀತಿಯ ಅಪಪ್ರಚಾರ ಮತ್ತು ಅವಮಾನಗಳನ್ನು ಸಹಿಸಿಕೊಂಡು ತಮ್ಮ ಮೇಲಿದ್ದ ಆರೋಪವನ್ನು ಸುಳ್ಳೆಂದು ಸಾಬೀತು ಪಡಿಸಲು ಒಂದೇ ಒಂದು ಅವಕಾಶ ಸಿಗಲಿದೆ ಎಂದೇ ಕಾದಿದ್ದರು. ಅವರ ಸಾವು, ನಮ್ಮ ರಾಷ್ಟ್ರ ಮತ್ತು ನ್ಯಾಯಾಂಗದ ಆತ್ಮಸಾಕ್ಷಿಯನ್ನೂ ಬೆಚ್ಚಿಬೀಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹೋರಾಟಗಾರ ನರಸಿಂಗಮೂರ್ತಿ, 2015ರಿಂದ 2019ರವರೆಗೂ 5128 ಯುಎಪಿಎ ಪ್ರಕರಣಗಳಲ್ಲಿ 7050 ಮಂದಿಯನ್ನು ಬಂಧಿಸಲಾಗಿದೆ. ಆದರೆ, ಈ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕೇವಲ ಶೇ.2.20ರಷ್ಟು ಮಾತ್ರ ಎಂದು ಲೋಕಸಭೆಯಲ್ಲಿಯೇ ತಿಳಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News