×
Ad

ಹೊಸ ಶಿಕ್ಷಣ ನೀತಿಯಂತೆ ಶಾಸ್ತ್ರೀಯ, ಪ್ರಾದೇಶಿಕ ಭಾಷೆಗಳಿಗೆ ಪ್ರಾಶಸ್ತ್ಯ ಸಿಗುತ್ತಿಲ್ಲ: ಬರಗೂರು ರಾಮಚಂದ್ರಪ್ಪ

Update: 2021-08-03 21:29 IST
 ಬರಗೂರು ರಾಮಚಂದ್ರಪ್ಪ

ಬೆಳಗಾವಿ, ಆ.3: ಪದವಿ ತರಗತಿಗಳಲ್ಲಿ ಮೂರು ವರ್ಷಗಳಿಗಿದ್ದ ಭಾಷಾ ತರಗತಿಗಳನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಲಾಗಿದ್ದು, ಇದು ಹೊಸ ಶಿಕ್ಷಣ ನೀತಿಯ ದ್ವಂದ್ವ ನಿಲುವಾಗಿದೆ ಎಂದು ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ. 

ಮಂಗಳವಾರ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ 'ಪದವಿ ವ್ಯಾಸಂಗದಲ್ಲಿ ಸಾಹಿತ್ಯದ ಮಹತ್ವ' ಎಂಬ ವೆಬಿನಾರ್‍ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
'ಶಾಸ್ತ್ರೀಯ ಮತ್ತು ಪ್ರಾದೇಶಿಕ ಭಾಷೆಗಳಿಗೆ ಪ್ರಾಶಸ್ತ್ಯ ಕೊಡಬೇಕು ಎಂದು ನೀತಿಯಲ್ಲಿ ಒಂದೆಡೆ ಹೇಳಿದರೆ, ಮತ್ತೊಂದು ಕಡೆ ಪದವಿ ತರಗತಿಗಳಲ್ಲಿ ಭಾಷಾ ತರಗತಿಗಳನ್ನು ಒಂದು ವರ್ಷಕ್ಕೆ ಕಡಿತಗೊಳಿಸಿದೆ. ಇದು ಹೊಸ ಶಿಕ್ಷಣ ನೀತಿಯ ದ್ವಂದ್ವ ನಿಲುವಾಗಿದೆ ಎಂದು ವಿಶ್ಲೇಷಿಸಿದರು.

ಬಹುತ್ವವೇ ಭಾರತದ ಮೂಲ ಅಡಿಪಾಯ. ಹೀಗಾಗಿ, ನೂತನವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡುವಾಗ ಪ್ರಾದೇಶಿಕ ಭಾಷೆಗೆ ಒತ್ತು ಕೊಡಬೇಕು ಎಂದು ಹೇಳಿದರು.

ನಾವು ದೇವರಿಗೆ ದಾಸರು, ಅರಸರಿಗೆ ದಾಸರಲ್ಲ ಎನ್ನುವುದನ್ನು ತಮ್ಮ ಸಾಹಿತ್ಯದ ಮೂಲಕ ದಾಸರು ಜಗತ್ತಿಗೆ ತಿಳಿಸಿದರು. ಅದನ್ನು ನಾವು ಅರ್ಥ ಮಾಡಿಕೊಂಡು ಪ್ರಭುತ್ವದ ದಾಸರಾಗುವುದನ್ನು ಇಂದು ಬಿಡಬೇಕು. ಸಾಹಿತ್ಯ ಸಮುದಾಯದ ಪ್ರತಿಬಿಂಬ. ಅದನ್ನು ಓದುವುದರಿಂದ ಸುಂದರ ಸಮಾಜ ಸೃಷ್ಟಿಸಲು ಸಾಧ್ಯ. ಚಲನಶೀಲ, ಚಿಂತನಶೀಲ ಪಠ್ಯಗಳಿಂದ ಪ್ರಬುದ್ಧ ಸಮಾಜ ನಿರ್ಮಾಣವಾಗಲಿದೆ ಎಂದರು.

ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಮಾತನಾಡಿ, 'ಹಳಗನ್ನಡ-ನಡುಗನ್ನಡ-ಹೊಸಗನ್ನಡ ಸಾಹಿತ್ಯಗಳ ಬೋಧನಾ ಕ್ರಮವು ಇನ್ನಷ್ಟು ಸುಧಾರಣೆಯಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಪದವಿ ತರಗತಿಗಳ ಅಧ್ಯಾಪಕರ ಬೋಧನೆ ಇನ್ನಷ್ಟು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಲುಪಲಿ ಎನ್ನುವ ಆಶಯ ನಮ್ಮದು' ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಂ. ಜಯಪ್ಪ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್.ಎಂ. ಹುರಕಡ್ಲಿ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News