ಕಳಸ: 4 ದಿನಗಳ ಬಳಿಕ ಭದ್ರಾ ನದಿಯಲ್ಲಿ ಬೆಂಗಳೂರು ಮೂಲದ ವೈದ್ಯನ ಮೃತದೇಹ ಪತ್ತೆ

Update: 2021-08-04 13:38 GMT

ಚಿಕ್ಕಮಗಳೂರು, ಆ.4: ಕಳೆದ ನಾಲ್ಕು ದಿನಗಳ ಹಿಂದೆ ಜಿಲ್ಲೆಯ ಕಳಸ ಪಟ್ಟಣ ಸಮೀಪದಲ್ಲಿ ಹರಿಯುವ ಭದ್ರಾ ನದಿಗೆ ಕಾಲು ಜಾರಿ ಬಿದ್ದು, ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ವೈದ್ಯ ರುದ್ರೇಶ್ ಅವರ ಮೃತದೇಹ ಬುಧವಾರ ಸತತ ಶೋಧದ ಬಳಿಕ ಹಳುವಳ್ಳಿ ಎಂಬಲ್ಲಿ ಪತ್ತೆಯಾಗಿದೆ.

ಬೆಂಗಳೂರು ಮೂಲದ ವೈದ್ಯ ರುದ್ರೇಶ್ ತಮ್ಮ 9 ಮಂದಿ ಸ್ನೇಹಿತರೊಂದಿಗೆ ಜಿಲ್ಲಾ ಪ್ರವಾಸಕ್ಕೆ ಬಂದಿದ್ದು, ಕಳಸ ಪಟ್ಟಣ ಸಮೀಪದ ಹೋಮ್‍ಸ್ಟೇ ಒಂದರಲ್ಲಿ ತಂಗಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ವೈದ್ಯ ರುದ್ರೇಶ್ ಸೇರಿದಂತೆ 8 ಮಂದಿ ಸ್ನೇಹಿತರಿದ್ದ ತಂಡ ಕಳಸ ಪಟ್ಟಣ ಸಮೀಪದಲ್ಲೇ ಹರಿಯುವ ಭದ್ರ ನದಿ ತೀರವಾಗಿರುವ ಕಂಚಿನಕೆರೆಯ ವಶಿಷ್ಠಾಶ್ರಮ ಎಂಬಲ್ಲಿಗೆ ತೆರಳಿದ್ದರು. ಈ ವೇಳೆ 8 ಮಂದಿ ಪ್ರವಾಸಿಗರು ಭದ್ರಾ ನದಿ ತೀರದಲ್ಲಿ ಪೊಟೊ ತೆಗೆಸಿಕೊಂಡಿದ್ದು, ರುದ್ರೇಶ್ ಸೆಲ್ಪೀ ತೆಗೆಯಲು ನದಿ ದಡದಲ್ಲಿ ನಿಂತಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದರು.

ಭಾರೀ ಮಳೆಯಿಂದ ತುಂಬಿ ಹರಿಯುತ್ತಿದ್ದ ಭದ್ರಾ ನದಿಗೆ ಬಿದ್ದಿದ್ದ ರುದ್ರೇಶ್ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಸುದ್ದಿ ತಿಳಿದ ಕಳಸ ಪೊಲೀಸರು ಅಗ್ನಿಶಾಮಕದಳ, ಎಸ್‍ಡಿಆರ್‍ಎಫ್ ಸಿಬ್ಬಂದಿ, ಕುಶಾಲನಗರದ ರಿವರ್ ರಾಫ್ಟಿಂಗ್ ತಂಡ, ಉಡುಪಿಯ ಸ್ಕೂಬಾ ಡೈವರ್ ಸೇರಿದಂತೆ ಧರ್ಮಸ್ಥಳ ಸಂಘದ ಸ್ವಯಂ ಸೇವಕರ ತಂಡದೊಂದಿಗೆ ರುದ್ರೇಶ್ ಅವರ ಮೃತದೇಹಕ್ಕಾಗಿ ಕಳೆದ ನಾಲ್ಕು ದಿನಗಳಿಂದ ಹುಡುಕಾಡಿದರೂ ಶವ ಪತ್ತೆಯಾಗಿರಲಿಲ್ಲ.

ಬುಧವಾರ ಈ ತಂಡಗಳ ಸದಸ್ಯರು ಶೋಧ ಕಾರ್ಯದಲ್ಲಿ ತೊಡಗಿದ್ದ ವೇಳೆ ರುದ್ರೇಶ್ ನೀರಿಗೆ ಬಿದ್ದ ಸ್ಥಳದಿಂದ ಸುಮಾರು 5 ಕಿಮೀ ದೂರದ ಹಳುವಳ್ಳಿ ಎಂಬಲ್ಲಿ ರುದ್ರೇಶ್ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಕಳಸ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಬೆಂಗಳೂರಿನಿಂದ ಆಗಮಿಸಿದ್ದ ರುದ್ರೇಶ್ ಅವರ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಈ ವೇಳೆ ಸಂಬಂಧಿಕ ಆಕ್ರಂಧನ ಮುಗಿಲುಮುಟ್ಟಿತ್ತು. ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿ ಸದ್ಯ ಭಾರೀ ಮಳೆಯಿಂದಾಗಿ ಎಲ್ಲ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರಗಳಿಗೆ ಪ್ರವಾಸಿಗರು ಹೋಗುವುದು ಅಪಾಯಕ್ಕೆ ಕಾರಣವಾಗುತ್ತಿದೆ. ನದಿ ತೀರಗಳು ನೆರೆ ನೀರಿನಿಂದ ಅಪಾಯಕಾರಿಯಾಗಿ ಪರಿಣಮಿಸಿದೆ. ದೂರದ ಪ್ರವಾಸಿಗರು ಕಾಲು ಜಾರಿ ನದಿಗೆ ಬೀಳುವಂತಹ ಘಟನೆಗಳು ಹಿಂದೆಯೂ ನಡೆದಿದ್ದು, ಈಗಲೂ ನಡೆಯುತ್ತಿವೆ. ಆದ್ದರಿಂದ ಪ್ರವಾಸಿಗರು ಸದ್ಯ ನದಿ ತೀರಗಳಿಗೆ ಭೇಟಿ ನೀಡಬಾರದು. ನದಿ ತೀರಕ್ಕೆ ಪ್ರವಾಸಕ್ಕೆ ತೆರಳಬಾರದು. ವ್ಯೂ ಪಾಯಿಂಟ್‍ಗಳಲ್ಲಿ ಸೆಲ್ಫಿ ಹುಚ್ಚಿನಿಂದಾಗಿ ಅಪಾಯಗಳು ಸಂಭವಿಸುತ್ತಿದ್ದು, ಇಂತಹ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಭಾರೀ ಎಚ್ಚೆರಿಕೆ ವಹಿಸಬೇಕು. ಅವಘಡಗಳು ಸಂಭವಿಸಿದಲ್ಲಿ ಕೂಡಲೇ 112 ಸಂಖ್ಯೆ ಕರೆ ಮಾಡಿದಲ್ಲಿ ಪೊಲೀಸ್ ಇಲಾಖೆ ಶೀಘ್ರ ನೆರವಿಗೆ ಬರಲಿದೆ.

- ಎಂ.ಎಚ್.ಅಕ್ಷಯ್, ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News