ಸಚಿವ ಸಂಪುಟ ವಿಸ್ತರಣೆ: ಪಕ್ಷಕ್ಕೆ ವಲಸೆ ಬಂದ 10 ಮಂದಿಗೆ ಪಟ್ಟ

Update: 2021-08-04 16:35 GMT

ಬೆಂಗಳೂರು, ಆ. 4: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಮೂಲ `ಕಾರಣಕರ್ತರು' ಎನ್ನಲಾಗಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷ ತ್ಯಜಿಸಿ ಬಂದು ಉಪ ಚುನಾವಣೆಯಲ್ಲಿ ಪುನರ್ ಆಯ್ಕೆಯಾದ ಒಟ್ಟು 10 ಮಂದಿಗೆ ಸಚಿವ ಸ್ಥಾನ ನೀಡಿದ್ದು, ವಲಸಿಗರಿಗೆ ಪಟ್ಟ ಗಟ್ಟಿಯಾಗಿದೆ.

ಶಿವರಾಂ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಬಿ.ಎ.ಬಸವರಾಜು(ಭೈರತಿ), ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ, ಎಂಟಿಬಿ ನಾಗರಾಜ್(ಮೇಲ್ಮನೆ ಸದಸ್ಯ), ಕೆ.ಸಿ.ನಾರಾಯಣಗೌಡ, ಆನಂದ್ ಸಿಂಗ್, ಮುನಿರತ್ನ ಸೇರಿದಂತೆ ಒಟ್ಟು ಹತ್ತು ಮಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿದೆ. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರನ್ನು ವರಿಷ್ಟರು ಪರಿಗಣಿಸಿಲ್ಲ.

ಬಿಎಸ್‍ವೈ ಸಂಪುಟದಲ್ಲಿ ಸಚಿವರಾಗಿದ್ದ ಸಿ.ಪಿ.ಯೋಗೇಶ್ವರ್, ಆರ್.ಶಂಕರ್ ಹಾಗೂ ಶ್ರೀಮಂತ ಪಾಟೀಲ್ ಅವರನ್ನು ಕೈಬಿಡಲಾಗಿದೆ. ಅಲ್ಲದೆ, ಹಿರಿಯರಾದ ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿತ್ತು. ಆದರೆ, ಅವರಿಗೂ ಈ ಬಾರಿ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಜೊತೆಗೆ ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದ ಮಹೇಶ್ ಕುಮಟಳ್ಳಿ ಅವರಿಗೂ ಸಚಿವ ಸ್ಥಾನ ಕೈತಪ್ಪಿದೆ.

ಉಳಿದಂತೆ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಶಿವರಾಂ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಬಿ.ಎ. ಬಸವರಾಜು(ಭೈರತಿ), ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ, ಎಂಟಿಬಿ ನಾಗರಾಜ್, ಕೆ.ಸಿ.ನಾರಾಯಣಗೌಡ, ಆನಂದ್ ಸಿಂಗ್ ಅವರಿಗೆ ಬೊಮ್ಮಾಯಿ ಸಂಪುಟದಲ್ಲಿಯೂ ಅವಕಾಶ ಸಿಕ್ಕಿದ್ದು, ಇದೀಗ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರಿಗೂ ಸಚಿವ ಸ್ಥಾನ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News