ಸಂಪುಟ ವಿಸ್ತರಣೆ: ರಾಜ್ಯದ 13 ಜಿಲ್ಲೆಗಳಿಗೆ ಸಿಗದ `ಪ್ರಾತಿನಿಧ್ಯ'

Update: 2021-08-04 15:52 GMT

ಬೆಂಗಳೂರು, ಆ. 4: ಸಾಂಸ್ಕೃತಿಕ ನಗರಿ ಮೈಸೂರು, ಕಲ್ಯಾಣ ಕರ್ನಾಟಕದ ಕಲಬುರಗಿ, ಮಧ್ಯ ಕರ್ನಾಟಕದ ದಾವಣಗೆರೆ ಸೇರಿದಂತೆ ರಾಜ್ಯದ 13 ಜಿಲ್ಲೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಇದು ಅಲ್ಲಿನ ಶಾಸಕರು, ಮುಖಂಡರು ಹಾಗೂ ಜಿಲ್ಲೆಯ ಜನತೆ ಅಸಮಾಧಾನ, ಆಕ್ರೋಶಕ್ಕೂ ಕಾರಣವಾಗಿದೆ.

ಮೈಸೂರು, ಕಲಬುರ್ಗಿ, ರಾಮನಗರ, ಕೊಡಗು, ರಾಯಚೂರು, ಹಾಸನ, ವಿಜಯಪುರ, ಬಳ್ಳಾರಿ, ದಾವಣಗೆರೆ, ಕೋಲಾರ, ಯಾದಗಿರಿ, ಚಿಕ್ಕಮಗಳೂರು, ಚಾಮರಾಜನಗರ ಸೇರಿದಂತೆ 13 ಜಿಲ್ಲೆಗಳಿಗೆ ಸಚಿವ ಸ್ಥಾನವೇ ಸಿಕ್ಕಿಲ್ಲ. ಆದರೆ, ಬೆಂಗಳೂರು ನಗರ ಜಿಲ್ಲೆಗೆ ಒಟ್ಟು ಆರು ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಬೆಳಗಾವಿ, ಹಾವೇರಿ, ಶಿವಮೊಗ್ಗ, ತುಮಕೂರು, ಗದಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ.

ಬೆಂಗಳೂರು ನಗರ ಜಿಲ್ಲೆಗೆ ಆರ್.ಅಶೋಕ್, ಡಾ.ಅಶ್ವತ್ಥ ನಾರಾಯಣ, ಎಸ್.ಟಿ.ಸೋಮಶೇಖರ್, ಬಿ.ಎ.ಬಸವರಾಜು(ಭೈರತಿ), ಕೆ. ಗೋಪಾಲಯ್ಯ, ಮುನಿರತ್ನ ಅವರು ಸೇರಿ ಒಟ್ಟು ಆರು ಸ್ಥಾನ ನೀಡುವ ಮೂಲಕ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಿಂಹಪಾಲು ಸಚಿವ ಸ್ಥಾನ ಬೆಂಗಳೂರಿಗೆ ನೀಡಿದಂತೆ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೋಟಾದಲ್ಲಿ ಎಂಟಿಬಿ ನಾಗರಾಜ್ ಅವರಿಗೆ ಸ್ಥಾನ ನೀಡಲಾಗಿದೆ.

ಇನ್ನು ಬೆಳಗಾವಿ ಜಿಲ್ಲೆ-ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಹಾವೇರಿ-ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿ.ಸಿ.ಪಾಟೀಲ್, ಶಿವಮೊಗ್ಗ-ಕೆ.ಎಸ್.ಈಶ್ವರಪ್ಪ ಹಾಗೂ ಅರಗ ಜ್ಞಾನೇಂದ್ರ, ತುಮಕೂರು ಜಿಲ್ಲೆ-ಜೆ.ಸಿ.ಮಾಧುಸ್ವಾಮಿ ಹಾಗೂ ಬಿ.ಸಿ.ನಾಗೇಶ್, ಗದಗ ಜಿಲ್ಲೆ ಸಿ.ಸಿ.ಪಾಟೀಲ್ ಮತ್ತು ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ಸ್ಥಾನ ನೀಡಿದ್ದು, ಹಲವು ಜಿಲ್ಲೆಗಳನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರಾದೇಶಿಕ ಸಮತೋಲನ ಕಾಪಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಹೇಳಿದ್ದರು. ಆದರೆ, ಅವರ ನೇತೃತ್ವದ ಸಂಪುಟದಲ್ಲಿ ಕೆಲವು ಜಿಲ್ಲೆಗಳಿಗಷ್ಟೇ ಪ್ರಾತಿನಿಧ್ಯ ನೀಡಲಾಗಿದೆ. ಇದು ಬಿಜೆಪಿ ಪಕ್ಷದ ಮುಖಂಡರು, ಸ್ಥಳೀಯ ಶಾಸಕರು ಹಾಗೂ ಜನಸಾಮಾನ್ಯರ ಆಕ್ರೋಶಕ್ಕೂ ಕಾರಣವಾಗಿದೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಪ್ರಾತಿನಿಧ್ಯಕ್ಕೆ ಆಗ್ರಹಿಸಿ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News