ಮೈಸೂರು: ವೇತನ ನೀಡದಿರುವುದಕ್ಕೆ ಗ್ರಾಪಂ ಕಚೇರಿಯಲ್ಲೇ ಪೌರಕಾರ್ಮಿಕ ಆತ್ಮಹತ್ಯೆ

Update: 2021-08-04 16:19 GMT

ಮೈಸೂರು,ಆ.4: ಕಳೆದ 8-10 ತಿಂಗಳುಗಳಿಂದ ವೇತನ ನೀಡದಿರುವುದರಿಂದ ಬೇಸತ್ತು ಪೌರಕಾರ್ಮಿಕರೊಬ್ಬರು ಗ್ರಾಪಂ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಂಜನಗೂಡು ತಾಲೂಕಿನ ಕಳಲೆ ಗ್ರಾಮದಲ್ಲಿ ನಡೆದಿದೆ.

ರಂಗ(40) ಮೃತ ಪೌರಕಾರ್ಮಿಕ. ಕಳಲೆ ಗ್ರಾಪಂನಲ್ಲಿ 13 ವರ್ಷಗಳಿಂದ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಕಳೆದ ಕೆಲವು ತಿಂಗಳುಗಳಿಂದ ವೇತನ ನೀಡಿರಲೇ ಇಲ್ಲ ಎನ್ನಲಾಗಿದೆ. ಈ ವಿಚಾರವಾಗಿ ಬುಧವಾರ ಬೆಳಗ್ಗೆ ಗ್ರಾಪಂ ಅಧ್ಯಕ್ಷರನ್ನು ಕೇಳಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಮನನೊಂದ ಪೌರಕಾರ್ಮಿಕ ರಂಗ, ಕಚೇರಿ ಸಿಬ್ಬಂದಿ ಮಧ್ಯಾಹ್ನ ಊಟಕ್ಕೆ ತೆರಳಿದ ವೇಳೆ ಕಚೇರಿಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಿಡಿಒನಿಂದ ಕಪಾಳ ಮೋಕ್ಷ: ಶಾಸಕ ಹರ್ಷವರ್ಧನ್ ಆರೋಪ

ಕಳಲೆ ಗ್ರಾಪಂನ ಅಭಿವೃದ್ಧಿ ಅಧಿಕಾರಿ ಪೌರಕಾರ್ಮಿಕನಿಗೆ ಕಪಾಳಕ್ಕೆ ಹೊಡೆದಿದ್ದರಿಂದ ಹಾಗೂ ಕಳೆದ ಹತ್ತು ತಿಂಗಳುಗಳಿದೆ ವೇತನ ಆಗದಿರುವುದರಿಂದ ಪೌರಕಾರ್ಮಿಕ ರಂಗ ಎಂಬವರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಈ ಸಂಬಂಧ ಸಂಪೂರ್ಣ ಮಾಹಿತಿ ನೀಡುವಂತೆ ನಂಜನಗೂಡು ತಾಪಂ ಇಒ ಅವರಿಗೆ ಸೂಚಿಸಿದ್ದೇನೆ ಎಂದು ನಂಜನಗೂಡು ಮೀಸಲು ಕ್ಷೇತ್ರದ ಶಾಸಕ ಹರ್ಷವರ್ಧನ್ ಘಟನೆ ಕುರಿತ ಮಾಹಿತಿ ನೀಡಿದ್ದಾರೆ.

ಪೌರಕಾರ್ಮಿಕನ ಆತ್ಮಹತ್ಯೆ ಸಂಬಂಧ ಬುಧವಾರ ‘ವಾರ್ತಾಭಾರತಿ’ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಪಂಚಾಯತ್ ಅಭಿವೃದ್ಧಿ ಪೌರಕಾರ್ಮಿಕರ ಕಪಾಳಕ್ಕೆ ಹೊಡೆದಿದ್ದರಿಂದ ಮತ್ತು ಕಳೆದ ಹತ್ತು ತಿಂಗಳುಗಳಿದೆ ವೇತನ ಆಗದಿರುವುದರಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ನಾಳೆ ನಾನು ಕಳಲೆ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ದೇನೆ ಎಂದು ಹೇಳಿದರು. ಓರ್ವ ಮೀಸಲು ಕ್ಷೇತ್ರದ ಶಾಸಕ ಕ್ಷೇತ್ರದಲ್ಲೇ ಇಂತಹ ಅಮಾನವೀಯ ಘಟನೆ ನಡೆದಿರುವುದು ಅತ್ಯಂತ ಖಂಡನೀಯ, ಈ ಸಂಬಂಧ ಯಾರೇ ತಪ್ಪಿತಸ್ಥರಿದ್ದರು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇಡೀ ಗ್ರಾಮವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಕಳೆದ ಹತ್ತು ತಿಂಗಳುಗಳಿಂದ ವೇತನ ನೀಡದಿರುವುದು ದುರದೃಷ್ಟಕರ, ಕಚೇರಿಯಲ್ಲೇ ಪೌರಕಾರ್ಮಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರೆ ಆತ ಎಷ್ಟು ಬೇಸತ್ತಿರಬೇಕು. ಈ ಸಾವು ಅತ್ಯಂತ ಖಂಡನೀಯ. ಸರಕಾರ ಕೂಡಲೇ ಸಂಬಂಧಪಟ್ಟವರ ಮೇಲೆ ಕ್ರಮ ಜುರುಗಿಸಿ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಮೂಲಕ ಖಾಯಂ ನೌಕರಿ ನೀಡಬೇಕು.

ಕಳಲೆ ಕೇಶವಮೂರ್ತಿ,
                                                 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News