ಉಪಮುಖ್ಯಮಂತ್ರಿ `ಕಿರೀಟ'ಕ್ಕೆ ಬಿಜೆಪಿ ವರಿಷ್ಠರ ಬ್ರೇಕ್ !

Update: 2021-08-04 17:03 GMT

ಬೆಂಗಳೂರು, ಆ. 4: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ `ಕಿರೀಟ'ಕ್ಕೆ ಬ್ರೇಕ್ ಹಾಕಲಾಗಿದೆ.

ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಹಿರಿಯ ಶಾಸಕರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಈ ಬಾರಿ ಯಾವುದೇ ಕಾರಣಕ್ಕೂ ಉಪಮುಖ್ಯಮಂತ್ರಿ ಹುದ್ದೆಯನ್ನು ಯಾರಿಗೂ ನೀಡುವುದು ಬೇಡ ಎಂಬ ತೀರ್ಮಾನ ಕೈಗೊಂಡಿದ್ದು, ಈ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸ್ಪಷ್ಟಪಡಿಸಿದ್ದಾರೆ.

ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಗೋವಿಂದ ಎಂ.ಕಾರಜೋಳ, ಡಾ.ಅಶ್ವತ್ಥ ನಾರಾಯಣ ಹಾಗೂ ಲಕ್ಷ್ಮಣ ಸವದಿ ಸೇರಿದಂತೆ ಮೂರು ಮಂದಿಯನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಇದೀಗ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ನಾಲ್ಕೈದು ಮಂದಿಯನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ವರಿಷ್ಠರು ಈ ಬಾರಿ ಯಾರಿಗೂ ಡಿಸಿಎಂ ಹುದ್ದೆಯನ್ನು ನೀಡುವುದು ಬೇಡ ಎಂದು ಕೈಬಿಟ್ಟಿದ್ದಾರೆ.

`ಉಪಮುಖ್ಯಮಂತ್ರಿ ಹುದ್ದೆ'ಗೆ ಯಾವುದೇ ಸಾಂವಿಧಾನಿಕ ಮಾನ್ಯತೆ ಇಲ್ಲ. ಅಲ್ಲದೆ, ಉಪಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಅನಗತ್ಯ ತಾರತಮ್ಯ ಮಾಡಲಾಗುತ್ತದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ, ವರಿಷ್ಠರು ಈ ನಿರ್ಧಾರ ಮಾಡಿದ್ದಾರೆ. ಡಿಸಿಎಂ ಹುದ್ದೆಯಿಂದ ಯಾವುದೇ ಲಾಭವೂ ಇಲ್ಲ. ಹೆಸರಿಗಷ್ಟೆ ಡಿಸಿಎಂ ಹುದ್ದೆಯಾಗಿದೆ. ಹೀಗಾಗಿ ಉಪಮುಖ್ಯಮಂತ್ರಿ ಹುದ್ದೆಯನ್ನು ಕೈಬಿಡಲಾಗಿದೆ.

ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಬಿ.ಶ್ರೀರಾಮುಲು, ಡಾ.ಅಶ್ವತ್ಥ ನಾರಾಯಣ, ಆರ್.ಅಶೋಕ್ ಸೇರಿದಂತೆ ಹಲವು ಮಂದಿ ಉಪಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳಾಗಿದ್ದರು. ಕಾರಜೋಳ, ಕೆ.ಎಸ್.ಈಶ್ವರಪ್ಪ, ಬಿ.ಶ್ರೀರಾಮುಲು ಬೆಂಬಲಿಗರಿಂದ `ತಮ್ಮ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನೇ ನೀಡಬೇಕು' ಎಂದು ಆಗ್ರಹಪಡಿಸಿದ್ದರು. ಈಶ್ವರಪ್ಪ ಪರವಾಗಿ ವಿವಿಧ ಮಠಾಧಿಪತಿಗಳು ಬಹಿರಂಗವಾಗಿ ಸುದ್ದಿಗೋಷ್ಟಿ ನಡೆಸಿ `ಈಶ್ವರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದು ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು' ಎಂದು ಒತ್ತಾಯಿಸಿದ್ದರು.

ಒಕ್ಕಲಿಗ ಸಮುದಾಯದ ಆರ್.ಅಶೋಕ್ ಮತ್ತು ಡಾ.ಅಶ್ವತ್ಥ ನಾರಾಯಣ ಅವರೂ ಉಪಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ, ಅಂತಿಮವಾಗಿ ವರಿಷ್ಠರು ಉಪಮುಖ್ಯಮಂತ್ರಿ ಸ್ಥಾನವನ್ನು ಕೈಬಿಟ್ಟಿದ್ದಾರೆ. ಹೀಗಾಗಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಯಾರಿಗೂ ಉಪಮುಖ್ಯಮಂತ್ರಿ ಸ್ಥಾನ ನೀಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News