ಪ್ರವಾಹ ಪರಿಸ್ಥಿತಿ ಪರಿಶೀಲನೆ, ಕೋವಿಡ್ ಟಾಸ್ಕ್ ಫೋರ್ಸ್ ಪುನರ್ ರಚನೆಗೆ ಸಂಪುಟ ತೀರ್ಮಾನ: ಮುಖ್ಯಮಂತ್ರಿ

Update: 2021-08-04 16:31 GMT

ಬೆಂಗಳೂರು, ಆ. 4: ಎಲ್ಲ ಸಚಿವರು ತಮಗೆ ನಿಗದಿ ಪಡಿಸಿದ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ ಕೋವಿಡ್ ಮತ್ತು ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ನೂತನ ಸಚಿವ ಸಂಪುಟದ ಮೊದಲ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಬುಧವಾರ ರಾಜಭವನದಲ್ಲಿ 29 ಮಂದಿ ನೂತನ ಸಚಿವ ಪ್ರಮಾಣ ಸ್ವೀಕಾರದೊಂದಿಗೆ ಅಸ್ತಿತ್ವಕ್ಕೆ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದ ಮೊದಲ ಸಭೆ ವಿಧಾನಸೌಧದಲ್ಲಿ ನಡೆಯಿತು. ಸಂಪುಟ ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಬಸವರಾಜ ಬೊಮ್ಮಾಯಿ, ಸಚಿವರು ತಮಗೆ ನಿಗದಿಪಡಿಸಿದ ಆಯಾ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ, ಕೋವಿಡ್ ಸ್ಥಿತಿಗತಿ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿ, ಹೆಚ್ಚಿನ ಪರಿಹಾರ ಕ್ರಮಗಳ ಅಗತ್ಯವಿದ್ದರೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ಅಲ್ಲದೆ, ಕೋವಿಡ್ ಮೂರನೆ ಅಲೆ ಭೀತಿ ಹಿನ್ನೆಲೆಯಲ್ಲಿ ಕೋವಿಡ್ ಟಾಸ್ಕ್‍ಫೆÇೀರ್ಸ್ ಪುನಾರಚನೆ ಮಾಡಲು ತೀರ್ಮಾನಿಸಲಾಯಿತು. ಯಡಿಯೂರಪ್ಪ ರಾಜೀನಾಮೆ ನೀಡಿದ್ದರಿಂದ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ಕೋವಿಡ್ ಟಾಸ್ಕ್‍ಫೋರ್ಸ್ ಪುನರ್ ರಚನೆ ಮಾಡಲು ನಿರ್ಧರಿಸಲಾಗಿದೆ. ನೂತನ ಸಚಿವರಿಗೆ ಖಾತೆ ಹಂಚಿಕೆ ಬಳಿಕ ಕೋವಿಡ್ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಗ್ಯ, ವೈದ್ಯಕೀಯ ಶಿಕ್ಷಣ, ಕಂದಾಯ ಸಚಿವರನ್ನು ಒಳಗೊಂಡಂತೆ ಟಾಸ್ಕ್‍ಫೋರ್ಸ್ ಪುನರ್ ರಚಿಸಲಾಗುವುದು ಎಂದರು.

ಎಸ್ಟಿ ಸಚಿವಾಲಯ: ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್ಟಿ) ಸಮುದಾಯದ ಬಹುದಿನಗಳ ಬೇಡಿಕೆಯಂತೆ ಎಸ್ಸಿಪಿ-ಟಿಎಸ್ಪಿ ಯೋಜನೆಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಪೂರಕವಾಗಿ ಪ್ರತ್ಯೇಕ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯ ಸ್ಥಾಪನೆಗೆ ತೀರ್ಮಾನಿಸಲಾಯಿತು. ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕೆಂಬ ಆ ಸಮುದಾಯದ ಬೇಡಿಕೆ ಹಿನ್ನೆಲೆಯಲ್ಲಿ ಈ ವಿಚಾರವನ್ನು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.

2020-21 ಸಾಲಿನ ಯಡಿಯೂರಪ್ಪ ನೇತೃತ್ವದ ಸರಕಾರ ಆಯವ್ಯಯದಲ್ಲಿ ಘೋಷಿಸಿದಂತೆ ಮುಖ್ಯಮಂತ್ರಿಗಳ ಮೇಲ್ವಿಚಾರಣೆಯಲ್ಲಿ ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣ ಯೋಜನೆಗಳ ಸಮಗ್ರ ಅನುಷ್ಟಾನಕ್ಕೆ ಸಚಿವ ಸಂಪುಟ ತೀರ್ಮಾನ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News