ಬಿಎಸ್‍ವೈ ನಾಯಕತ್ವದ ವಿರುದ್ಧ ಧ್ವನಿ ಎತ್ತಿದವರಿಗೆ ತಪ್ಪಿದ ಸಚಿವ ಸ್ಥಾನ

Update: 2021-08-04 17:04 GMT
ಬಸನಗೌಡ ಪಾಟೀಲ್ ಯತ್ನಾಳ್,  ಅರವಿಂದ ಬೆಲ್ಲದ್,  ಸಿ.ಪಿ.ಯೋಗೇಶ್ವರ್,

ಬೆಂಗಳೂರು, ಆ.4: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ ಧ್ವನಿ ಎತ್ತಿದವರಿಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿಯೂ ಅವಕಾಶ ಕೈ ತಪ್ಪಿದೆ.

ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೇಶ್ವರ್, ಅರವಿಂದ ಬೆಲ್ಲದ್ ಹೆಸರು ಸಚಿವ ಸ್ಥಾನಕ್ಕೆ ಕೇಳಿ ಬರುತ್ತಿತ್ತು. ಆದರೆ, ಅಂತಿಮವಾಗಿ ಪ್ರಕಟವಾದ ಪಟ್ಟಿಯಲ್ಲಿ ಈ ಮೂವರ ಹೆಸರು ನಾಪತ್ತೆಯಾಗಿದೆ. ಆ ಮೂಲಕ ತಮ್ಮ ನಾಯಕತ್ವದ ವಿರುದ್ಧ ಧ್ವನಿ ಎತ್ತಿದವರಿಗೆ ಯಡಿಯೂರಪ್ಪ ಆಘಾತ ನೀಡಿದ್ದಾರೆ.

ಒಂದು ಹಂತದಲ್ಲಿ ಅರವಿಂದ ಬೆಲ್ಲದ್ ಹೆಸರು ಮುಖ್ಯಮಂತ್ರಿ ಹುದ್ದೆಗೂ ಕೇಳಿ ಬಂದಿತ್ತು. ಆದರೆ, ಈ ಸರಕಾರದಲ್ಲಿ ಸಚಿವ ಸ್ಥಾನ ಪಡೆಯಲು ಅವರಿಗೂ ಸಾಧ್ಯವಾಗಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಆರಂಭದಿಂದಲೂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೆ ತಮ್ಮ ಅಸಮಾಧಾನ ಹೊರಹಾಕುತ್ತಿದ್ದರು.

ಅಲ್ಲದೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಮಾತನ್ನು ಯತ್ನಾಳ್ ಅವರೇ ಮೊದಲ ಬಾರಿಗೆ ಹೇಳಿದ್ದರು. ಒಂದು ಹಂತದಲ್ಲಿ ತಮ್ಮನ್ನೆ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಲಿದೆ ಎಂದೂ ಯತ್ನಾಳ್ ಭಾವಿಸಿದ್ದರು ಎಂದು ತಿಳಿದು ಬಂದಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News