ನಂಜನಗೂಡು: ಮಕ್ಕಳ ಮಾರಾಟ ಜಾಲ ಪ್ರಕರಣ; ಇಬ್ಬರು ಮಹಿಳೆಯರ ಬಂಧನ

Update: 2021-08-04 17:46 GMT

ಮೈಸೂರು,ಆ.4: ನಂಜನಗೂಡು ನಗರದಲ್ಲಿ  ಮಕ್ಕಳ ಕಳ್ಳ ಸಾಗಣೆ  ತೊಡಗಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿದ್ದ ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕಿ ಮತ್ತೊಂದು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಸ್ಪಿ ಚೇತನ್ ಮಕ್ಕಳ ಜಾಲದ ಬಗ್ಗೆ ಮಾಹಿತಿ ನೀಡಿದರು.

ಮಕ್ಕಳ ಮಾರಾಟ ಜಾಲ ಪ್ರಕರಣದ ತನಿಖೆಗೆ ಇಳಿದ ಪೊಲೀಸರಿಗೆ ಈಗಾಗಲೇ ಸಿಕ್ಕಿಬಿದ್ದಿರುವ ಶ್ರೀಮತಿ ಅಲಿಯಾಸ್ ಸರಸ್ವತಿ ನಾಡಿಗ್ ಹಾಗೂ ಮಗಳು ಲಕ್ಷ್ಮಿ ಮತ್ತೊಂದು ಮಗುವನ್ನೂ ಸಹ ಮಾರಾಟ ಮಾಡಿರುವುದನ್ನು ಬಾಯಿಬಿಟ್ಟಿದ್ದಾರೆ.

ನಂಜನಗೂಡು ಪಟ್ಟಣದ ಮಂಜುಳಾ ಎಂಬವರಿಗೆ ಸೇರಿದ 8 ತಿಂಗಳ ಮಗುವನ್ನು ಹಣಕ್ಕಾಗಿ ಕೊಳ್ಳೇಗಾಲದ ದಂಪತಿಗೆ ಮಾರಾಟ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಶ್ರೀಮತಿ ಬಾಯ್ಬಿಟ್ಟಿದ್ದಾಳೆ. ಮಂಜುಳಾ ಗೃಹಿಣಿಯಾಗಿದ್ದು, ಪತಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದಾನೆ. ಬಡತನ ಹಿನ್ನೆಲೆಯಲ್ಲಿ ಮಗು ಮಾರಾಟದ ಜಾಲಕ್ಕೆ ಸಿಲುಕಿರುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಎರಡೂ ಪ್ರಕರಣಗಳಲ್ಲಿಯೂ ಎನ್.ಆರ್.ಮೊಹಲ್ಲಾದ ಎಸ್‍ಎಲ್‍ಇಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳು ಜನಿಸಿರುವುದು ಪ್ರಕರಣದಲ್ಲಿ ಆಸ್ಪತ್ರೆಯ ಪಾತ್ರದ ಕುರಿತು ಸಂಶಯ ವ್ಯಕ್ತವಾಗಿದೆ.

ಜ್ಯೋತಿ ಎಂಬವರಿಂದ ಪಡೆದ ಮೊದಲ ಮಗುವನ್ನು ಹೊಳೆನರಸೀಪುರದ ದಂಪತಿಗೆ 4 ಲಕ್ಷ ರೂ.ಗೆ ಮಾರಾಟ ಮಾಡಿರುವ ಪ್ರಕರಣದ ತನಿಖೆ ಪ್ರಾರಂಭಿಕ ಹಂತದಲ್ಲಿದ್ದು, ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುವುದು. ಎರಡು ಪ್ರಕರಣಗಳಲ್ಲಿ 3 ಹಾಗೂ 8 ತಿಂಗಳ ಎರಡು ಶಿಶುಗಳನ್ನು ರಕ್ಷಿಸಿದ್ದು, ಮಕ್ಕಳ ಆರೈಕೆ ಕೇಂದ್ರದ ಸುಪರ್ದಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸರಸ್ವತಿ ಮತ್ತು ಅವರ ಪುತ್ರಿ ಇಬ್ಬರಿಗೂ ಭಿಕ್ಷುಕರು, ನಿರ್ಗತಿಕರು, ವಿಧವೆಯರು, ಬೀದಿಬದಿಯ ನಿವಾಸಿಗಳೇ ಟಾರ್ಗೆಟ್ ಆಗಿದ್ದರು. ನಾನು ಅನಾಥಾಶ್ರಮ ನಡೆಸುತ್ತಿದ್ದೇನೆ, ನಿಮ್ಮ ಮಗುವನ್ನು ಚೆನ್ನಾಗಿ ಸಾಕುತ್ತೇನೆ ಎಂದು ಪುಸಲಾಯಿಸಿ, ಮಹಿಳೆಯರಿಂದ ಮಕ್ಕಳನ್ನು ಪಡೆದು ನಂತರ ಬೇರೆಯವರಿಗೆ ಲಕ್ಷಾಂತರ ರೂ.ಗೆ ಮಾರಾಟ ಮಾಡುತ್ತಿದ್ದರು ಎನ್ನುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಪತ್ರಿಕಾಗೋಷ್ಠಿಯಲ್ಲಿ ಅಡಿಷನಲ್ ಎಸ್ಪಿ ಶಿವಕುಮಾರ್, ನಂಜನಗೂಡು ಡಿವೈಎಸ್ಪಿ ಗೋವಿಂದರಾಜು, ಸರ್ಕಲ್ ಇನ್ಸ್‍ಪೆಕ್ಟರ್ ಲಕ್ಷ್ಮೀಕಾಂತ್ ತಳವಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News