ಸಚಿವ ಸ್ಥಾನ ಸಿಗದೆ ಇರುವುದರಿಂದ ನನಗೆ ಬೇಸರವಿಲ್ಲ: ಶಾಸಕ ಎಸ್.ಎ.ರಾಮದಾಸ್

Update: 2021-08-04 19:10 GMT
 ಶಾಸಕ ಎಸ್.ಎ.ರಾಮದಾಸ್

ಮೈಸೂರು,ಆ.4: ನೂತನ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಎಂದು ಭಾವಿಸಿದ್ದೆ. ಎಲ್ಲರೂ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುತ್ತೀಯ ಎಂದು ಅಭಿನಂದಿಸಿದ್ದರು. ಆದರೆ ಸಚಿವ ಸ್ಥಾನ ಕೈತಪ್ಪಿತು. ಇರಿಂದ ನನಗೆ ಯಾವುದೇ ಬೇಸರವಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನಲೆಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನ ಹೆಸರನ್ನೂ ದೆಹಲಿಗೆ ಕಳುಹಿಸಲಾಗಿದೆ. ಸಂಪುಟದಲ್ಲಿ ಇರುತ್ತೀಯಾ ಎಂದು ದೆಹಲಿಯ ನಾಯಕರು, ಮಠಾಧೀಶರು, ಪಕ್ಷದ ಹಿರಿಯರು ಸಹ ಅಭಿನಂದನೆ ಸಲ್ಲಿಸಿದ್ದರು. ಈಗ ಹೆಸರಿಲ್ಲ ಎಂದು ನನಗೆ ಬೇಸರವಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ನಾನು ಮಿಲಿಟರಿ ಅಧಿಕಾರಿ ಮಗ. ಯಾವುದನ್ನೂ ಸೋಲು ಎಂದಾಗಲಿ, ದುಃಖದಿಂದಾಗಲಿ ಸ್ವೀಕರಿಸುವುದಿಲ್ಲ. ಎಲ್ಲವನ್ನೂ ಸವಾಲಾಗಿ ಸ್ವೀಕರಿಸುತ್ತೇನೆ. ಲಾಬಿಯಲ್ಲಿ ನಂಬಿಕೆ ಇಟ್ಟಿಲ್ಲ. ನಾನೊಬ್ಬ ಮೆರಿಟ್ ವಿದ್ಯಾರ್ಥಿ. ಅರ್ಹತೆ ಇದ್ದರೆ ಅವಕಾಶ ಕೊಡಿ, ಇಲ್ಲವೇ ನನ್ನಿಂದ ಆಗಬೇಕಾದ ಕೆಲಸ ನಿರ್ವಹಿಸುತ್ತೇನೆ ಎಂದರು.

ಕಳೆದ ಬಾರಿಯೂ ನೀನು ಕ್ಯಾಬಿನೆಟ್‍ನಲ್ಲಿ ಇರುತ್ತೀಯಾ ಎಂದಿದ್ದರು. ಪಾಸ್, ಸೆಕ್ಯುರಿಟಿ ಕೊಟ್ಟಿದ್ದರು. ನಂತರ ಎಲ್ಲವನ್ನೂ ತೆಗೆದರು. ಆಗಲೂ ನಾನು ಬೇಸರ ಮಾಡಿಕೊಳ್ಳದೇ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋಗಿದ್ದೆ. ಈಗ ಮೈಸೂರಿನಲ್ಲಿರುವುದರಿಂದ ಹೋಗಲು ಆಗಲಿಲ್ಲ ಎಂದು ತಿಳಿಸಿದರು.

ನನಗೆ ಹಲವರು ಅಭಿನಂದನೆ ಸಲ್ಲಿಸಿದ್ದರು. ದೆಹಲಿ, ಕ್ಷೇತ್ರದವರು, ಮಠಾಧೀಶರು ಅಭಿನಂದನೆ ಸಲ್ಲಿಸಿದ್ದರು. ನಿರೀಕ್ಷೆ ಇಟ್ಟುಕೊಳ್ಳುವುದು ಮನುಷ್ಯನ ಜೀವನ. ನಿರೀಕ್ಷೆ ಸಹಜ. ಆದರೆ, ಯಾವ ಕಾರಣಗಳಿಗೋ ಗೊತ್ತಿಲ್ಲ, ರಾಜಕೀಯ ಸ್ಥಿತಿಗತಿ ಬೇರೆ ಕಾರಣಗಳಿಗೆ ಸಿಗದಿರಬಹುದು. ಅದು ಅನ್ಯಾಯ ಎಂದು ನಾನು ಭಾವಿಸಿಲ್ಲ. ಆರೋಗ್ಯ, ರಸ್ತೆ ಅಭಿವೃದ್ಧಿ, ಮನೆಗಳ ನಿರ್ಮಾಣ, ಯೋಜನೆಗಳ ಅನುಷ್ಠಾನ ದೃಷ್ಟಿಯಿಂದ ನನ್ನ ಕ್ಷೇತ್ರ ಅಭಿವೃದ್ಧಿ ಮಾಡುವ ಉದ್ದೇಶದಿಂದ ಕೆಲಸ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದರು. 

ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳನ್ನು ಕ್ಷೇತ್ರದ ಪ್ರತಿ ಮನೆ ಬಾಗಿಲಿಗೂ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News