ವಿಲಾಸಿ ಕಾರಿಗೆ ತೆರಿಗೆ ವಿನಾಯಿತಿ ಕೋರಿಕೆ: ವಿಜಯ್ ನಂತರ ನಟ ಧನುಷ್‍ಗೆ ಮದ್ರಾಸ್ ಹೈಕೋರ್ಟ್ ತರಾಟೆ

Update: 2021-08-05 13:19 GMT
ಧನುಷ್‍ (File Photo: PTI)

ಚೆನ್ನೈ: ಇಂಗ್ಲೆಂಡ್‍ನಿಂದ ರೋಲ್ಸ್ ರಾಯ್ಸ್ ಕಾರನ್ನು ಆಮದು ಮಾಡಲು ಪ್ರವೇಶಾತಿ ತೆರಿಗೆಯಿಂದ ವಿನಾಯಿತಿ ನೀಡುವಂತೆ ತಾನು 2015ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆಯಲು ನಟ ಕೆ ಧನುಷ್ ಅವರಿಗೆ ಮದ್ರಾಸ್ ಹೈಕೋರ್ಟ್ ಇಂದು ನಿರಾಕರಿಸಿದೆ. ಈ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ 2018ರಲ್ಲಿ ಇತ್ಯರ್ಥವಾದ ನಂತರವೂ ತೆರಿಗೆ ಪಾವತಿಸದೇ ಇದ್ದ ನಟನನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ನಟ ಈಗಾಗಲೇ ಶೇ50ರಷ್ಟು ತೆರಿಗೆ ಪಾವತಿಸಿದ್ದಾರೆ ಹಾಗೂ ಬಾಕಿ ತೆರಿಗೆಯನ್ನೂ ಪಾಲಿಸಲು ಸಿದ್ಧರಿದ್ದಾರೆ ಎಂದು ಇಂದಿನ ವಿಚಾರಣೆ ವೇಳೆ ಧನುಷ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರಲ್ಲದೆ ಹಿಂದಿನ ಅರ್ಜಿ ವಾಪಸಾತಿಗೆ ಅನುಮತಿಸಲು ಕೋರಿದರು.

ಇದಕ್ಕೆ ನಿರಾಕರಿಸಿದ ಜಸ್ಟಿಸ್ ಎಸ್ ಎಂ ಸುಬ್ರಮಣಿಯಂ, "ನಿಮ್ಮ ಉದ್ದೇಶ ನೈಜವಾಗಿದ್ದಲ್ಲಿ ನೀವು ಕನಿಷ್ಠ 2018ರಲ್ಲಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇತ್ಯರ್ಥ ಪಡಿಸಿದ ನಂತರವಾದರೂ ತೆರಿಗೆ ಪಾವತಿಸಬೇಕಿತ್ತು. ಈಗ ಹೈಕೋರ್ಟ್ ಪ್ರಕರಣದ ತೀರ್ಪು ನೀಡಲಿದೆ ಎಂದು ತಿಳಿಯುತ್ತಲೇ ನೀವು ಅರ್ಜಿ ವಾಪಸ್ ಪಡೆಯಲು ಕೋರುತ್ತಿದ್ದೀರಿ,'' ಎಂದು ಹೇಳಿದರು.

"ನೀವು ತೆರಿಗೆದಾರರ ಹಣ ಬಳಸಿ ನಿರ್ಮಿಸಲಾದ ರಸ್ತೆಗಳಲ್ಲಿ ನಿಮ್ಮ ಕಾರನ್ನು ಚಲಾಯಿಸಲಿದ್ದೀರಿ. ಒಬ್ಬ ಹಾಲು ಮಾರಾಟಗಾರ ಮತ್ತು ದಿನಗೂಲಿ ಕಾರ್ಮಿಕ ಕೂಡ ತಾವು ಖರೀದಿಸುವ ಪೆಟ್ರೋಲ್‍ಗೆ ತೆರಿಗೆ ಪಾವತಿಸುತ್ತಾರೆ. ಅವರ್ಯಾರೂ ತೆರಿಗೆ ಪಾವತಿಯಿಂದ ವಿನಾಯಿತಿ ಕೇಳಿಲ್ಲ,'' ಎಂದು ನ್ಯಾಯಾಧೀಶರು ಹೇಳಿದರು.

ಇಂದೇ ಧನುಷ್ ತೆರಿಗೆ ಪಾವತಿಸಬೇಕೆಂದು ಸೂಚಿಸಲು ವಾಣಿಜ್ಯ ತೆರಿಗೆ ಅಧಿಕಾರಿ ನ್ಯಾಯಾಲಯದಲ್ಲಿ ಹಾಜರಾಗಬೇಕು, ನಂತರ ಆದೇಶ ಹೊರಡಿಸುತ್ತೇನೆ,'' ಎಂದು ನ್ಯಾಯಾಧೀಶರು ಹೇಳಿದರು.

ಜುಲೈ 13ರಂದು ಇಂತಹುದೇ ಒಂದು ಪ್ರಕರಣದಲ್ಲಿ ತೆರಿಗೆ ವಿನಾಯಿತಿಗೆ ಅಪೀಲು ಸಲ್ಲಿಸಿದ್ದ ಇನ್ನೋರ್ವ ನಟ ವಿಜಯ್ ಅವರನ್ನೂ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News