370ನೇ ವಿಧಿ ರದ್ದುಗೊಂಡು ಎರಡು ವರ್ಷ : ಪರಿಸ್ಥಿತಿ ಶಾಂತಿಯುತವಾಗಿದೆ ; ಅಧಿಕಾರಿಗಳ ಹೇಳಿಕೆ

Update: 2021-08-05 16:07 GMT

ಹೊಸದಿಲ್ಲಿ,ಆ.5: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ 370ನೇ ವಿಧಿಯ ರದ್ದತಿಯ ಎರಡು ವರ್ಷಗಳ ಬಳಿಕ ಕಣಿವೆಯಲ್ಲಿ ಸ್ಥಿತಿ ಶಾಂತಿಯುತವಾಗಿದೆ ಎಂಂದು ಅಧಿಕಾರಿಗಳು ಹೇಳಿದ್ದಾರೆ.

ಶ್ರೀನಗರದ ಹೆಚ್ಚಿನ ಭಾಗಗಳಲ್ಲಿಯ ಅಂಗಡಿಗಳು ಗುರುವಾರ ಮುಚ್ಚಲ್ಪಟ್ಟಿದ್ದವು. ತಮ್ಮ ಮಳಿಗೆಗಳನ್ನು ತೆರೆದಿಡುವಂತೆ ಪೊಲೀಸರು ತಮ್ಮನ್ನು ಬಲವಂತಗೊಳಿಸುತ್ತಿದ್ದಾರೆ ಎಂದು ಹಲವಾರು ಪ್ರದೇಶಗಳಲ್ಲಿಯ ಅಂಗಡಿಕಾರರು ಆರೋಪಿಸಿದ್ದರೆ,ಪೊಲೀಸರು ತಮ್ಮ ಅಂಗಡಿಗಳ ಬೀಗಗಳನ್ನು ಮುರಿದಿದ್ದಾರೆ ಎಂದು ಅವರ ಪೈಕಿ ಹಲವರು ತಿಳಿಸಿದರು.

ಹಲವಾರು ಜಿಲ್ಲೆಗಳಲ್ಲಿ ಸಾರ್ವಜನಿಕ ಸಾರಿಗೆ ವಾಹನಗಳು ರಸ್ತೆಗಿಳಿದಿರಲಿಲ್ಲ. ಆದರೆ ಅನಂತನಾಗ್‌ನಂತಹ ಕೆಲವು ಜಿಲ್ಲೆಗಳು ಹಾಗೂ ಬಡ್ಗಾಮ್,ಗಂಡೇರಬಾಲ್ ಮತ್ತು ಕುಪ್ವಾರಾದ ಕೆಲವು ಭಾಗಗಳಲ್ಲಿ ಅಂಗಡಿಗಳು ತೆರೆದಿದ್ದವು.

ಗುರುವಾರ ವರ್ಚುವಲ್ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2020ರ ಆ.5 ಇತಿಹಾಸದಲ್ಲಿ ನೆನಪಿನಲ್ಲಿರುತ್ತದೆ. ಇದೇ ದಿನ 370ನೇ ವಿಧಿಯನ್ನು ರದ್ದುಗೊಳಿಸಲಾಗಿತ್ತು ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮೊದಲ ಹೆಜ್ಜೆಯನ್ನು ಇರಿಸಲಾಗಿತ್ತು ಎಂದು ಹೇಳಿದರು. 370ನೇ ವಿಧಿಯ ರದ್ದತಿಯ ಬಳಿಕ ಪ್ರದೇಶದಲ್ಲಿ ಅಭೂತಪೂರ್ವ ಶಾಂತಿ ನೆಲೆಸಿದೆ ಮತ್ತು ಪ್ರಗತಿಯಾಗಿದೆ ಎಂದು ಮೋದಿಯವರ ಖಾಸಗಿ ವೆಬ್‌ಸೈಟ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಕೂಡ ಹೇಳಿದೆ.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡು,ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ಕ್ರಮವನ್ನು ‘ತೀವ್ರ ಅನ್ಯಾಯ’ಎಂದು ಬಣ್ಣಿಸಿರುವ ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು,ಎರಡು ವರ್ಷಗಳ ಹಿಂದೆ ಈ ದಿನದಂದು ಜಮ್ಮು-ಕಾಶ್ಮೀರಕ್ಕೆ ಉಂಟು ಮಾಡಿದ್ದ ನೋವು,ಹಿಂಸೆ ಮತ್ತು ವಿಪ್ಲವವನ್ನು ಬಣ್ಣಿಸಲು ಶಬ್ದಗಳು ಮತ್ತು ಚಿತ್ರಗಳು ಸಾಲುವುದಿಲ್ಲ. ಅನಿಯಂತ್ರಿತ ದಬ್ಬಾಳಿಕೆಯು ತೆರೆದುಕೊಂಡಾಗ ಮತ್ತು ತೀವ್ರ ಅನ್ಯಾಯಗಳು ನಡೆದಾಗಿ ಅಸ್ತಿತ್ವವನ್ನುಳಿಸಿಕೊಳ್ಳಲು ಪ್ರತಿರೋಧದ ಹೊರತು ಬೇರೆ ಆಯ್ಕೆಯೇ ಇಲ್ಲ ಎಂದು ಟ್ವೀಟಿಸಿದ್ದಾರೆ.

ಇದೇ ಭಾವನೆಗಳನ್ನು ಪ್ರತಿಧ್ವನಿಸಿದ ಜಮ್ಮು ಆ್ಯಂಡ್ ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್‌ನ ಖುರ್ಷಿದ್ ಆಲಂ ಅವರು,ಆ.5 ಜಮ್ಮು-ಕಾಶ್ಮೀರದ ಇತಿಹಾಸದಲ್ಲಿ ಋಣಾತ್ಮಕ ಹೆಗ್ಗುರುತಾಗಿ ಉಳಿಯಲಿದೆ. ಅದು ಜಮ್ಮು-ಕಾಶ್ಮೀರದ ಜನತೆಗೆ ರಾಜಕೀಯ ಮತ್ತು ಮಾನಸಿಕ ಹಿನ್ನಡೆಯಾಗಿತ್ತು ಎಂದು ಹೇಳಿದರು.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನದ ಮರುಸ್ಥಾಪನೆಗೆ ಆಗ್ರಹಿಸಿರುವ ಗುಪ್ಕರ್ ಮೈತ್ರಿಕೂಟವು ಗುರುವಾರ ಎನ್‌ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ನಿವಾಸದಲ್ಲಿ ಸಭೆ ಸೇರಿದ್ದು,ಮುಫ್ತಿ ಸೇರಿದಂತೆ ಕಾಶ್ಮೀರದ ಪ್ರತಿಪಕ್ಷಗಳ ನಾಯಕರು ಭಾಗವಹಿಸಿದ್ದರು.

ಜಮ್ಮು-ಕಾಶ್ಮೀರವು ಈಗಲೂ ದಿಲ್ಲಿ ಮತ್ತು ಭಾರತದ ದಿಲ್(ಹೃದಯ)ನಿಂದ ಮೊದಲಿದ್ದಷ್ಟೇ ದೂರದಲ್ಲಿ ಉಳಿದಿದೆ ಎಂದು ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದ ಗುಪ್ಕರ್ ಮೈತ್ರಿಕೂಟ,‘ನ್ಯಾಯ ಕಾಶ್ಮೀರ ’ಘೋಷಣೆಯು ಒಂದು ತಮಾಷೆಯಾಗಿದೆ ಎಂದು ಬಣ್ಣಿಸಿತ್ತು.

ಈ ಮಧ್ಯೆ ಬಿಜೆಪಿಯ ಜಮ್ಮು-ಕಾಶ್ಮೀರ ಘಟಕವು ಕೇಂದ್ರವು ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಗೌರವಾನ್ವಿತ ಪುನರ್ವಸತಿಯನ್ನು ಖಚಿತಪಡಿಸಲು ಶ್ರಮಿಸುತ್ತಿದೆ ಎಂದು ಬುಧವಾರ ತಿಳಿಸಿತ್ತು.

ಗುರುವಾರ ಜಮ್ಮು-ಕಾಶ್ಮೀರದ ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ನಡೆದಿವೆ. ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ನಲ್ಲಿ ಪೊಲೀಸ್ ತಂಡದ ಮೇಲೆ ಉಗ್ರರು ದಾಳಿಯನ್ನು ನಡೆಸಿದ್ದರೆ,ಶ್ರೀನಗರದ ನೊವಟ್ಟಾ ಪ್ರದೇಶದ ಜಾಮಾ ಮಸೀದಿಯ ಬಳಿ ಸ್ಫೋಟವೊಂದು ಸಂಭವಿಸಿದೆ. ಇವೆರಡೂ ಘಟನೆಗಳಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News