ಲೆಕ್ಕ ಪತ್ರದಲ್ಲಿ ಅನುಮಾನ ಬಂದಾಗ ಐಟಿ ದಾಳಿ ಸಹಜ: ಸಚಿವ ಮಾಧುಸ್ವಾಮಿ

Update: 2021-08-05 16:24 GMT

ಮೈಸೂರು,ಆ.5: ಕಾಂಗ್ರೆಸ್‍ನವರು ತಮ್ಮ ಆಡಳಿತ ಕಾಲದಲ್ಲಿ ಐಟಿ-ಇಡಿ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡಂತೆಯೇ ಈಗಲೂ ಆಗುತ್ತಿದೆ ಎಂದು ತಪ್ಪಾಗಿ ಭಾವಿಸಿದ್ದಾರೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಟೀಕಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಜಮೀರ್ ಗೆ  ಬೇಕಾದಷ್ಟು ವ್ಯವಹಾರ ಇದೆ. ಅವರು ಬ್ಯೂಸಿನೆಸ್ ಕ್ಲಾಸ್ ಜನ. ಅವರೇನೂ ನನ್ನ ರೀತಿ ಹಳ್ಳಿಯಲ್ಲಿ ಇರುವ ಶಾಸಕರಲ್ಲ. ಐಟಿ, ಇಡಿ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಹೇಳುವುದು ಸರಿಯಲ್ಲ. ಅದರಲ್ಲೂ ಸಿದ್ದರಾಮಯ್ಯ ಅಂತಹವರು ಹೀಗೆ ಹೇಳುವುದು ತಪ್ಪು. ವ್ಯವಹಾರದ ಲೆಕ್ಕ ಪತ್ರಗಳಲ್ಲಿ ಅನುಮಾನ ಬಂದಾಗ ಈ ರೀತಿ ದಾಳಿ ಸಹಜ ಎಂದು ಹೇಳಿದರು.

ದಾಳಿಯೇ ತಪ್ಪು ಎಂದರೆ ಹೇಗೆ ಹೇಳಿ? ಸ್ವಾಯತ್ತ ಸಂಸ್ಥೆಗಳು ಅವರ ಕೆಲಸ ಅವರು ಮಾಡಬಾರದಾ? ಇದು ರಾಜಕೀಯ ದಾಳಿಯಲ್ಲ. ಲೆಕ್ಕದ ಅನುಮಾನ ಇದ್ದಾಗ ಪರಿಶೀಲನೆಗೆ ಬಂದಿರುತ್ತಾರೆ. ಜಮೀರ್ ಲೆಕ್ಕ ಪತ್ರ ಸರಿ ಇಟ್ಟು ಕೊಂಡಿದ್ದಾರೆ ಅದನ್ನು ತೋರಿಸುತ್ತಾರೆ ಅಷ್ಟೆ. ಇದಕ್ಕೆ ಬೇರೆ ರೀತಿಯ ಬಣ್ಣ ಬೇಡ ಎಂದು ತಿಳಿಸಿದರು.

ಹಳೆ ಮೈಸೂರು ಭಾಗಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಇಲ್ಲ ಎಂಬ ಅಸಮಾಧಾನಕ್ಕೆ ಪ್ರತಿಕ್ರಿಯಿಸಿ, ನಾನೂ ಕೂಡ ಹಳೆ ಮೈಸೂರು ಭಾಗದವನೆ. ತುಮಕೂರು ಕೂಡ ಹಳೆ ಮೈಸೂರಿನ ಭಾಗವೆ. ಯಾವುದೋ ಒತ್ತಡಗಳು, ಸಂದರ್ಭಗಳು ಬಂದಾಗ ಕೆಲವು ಸಲ ಹೀಗೆ ಆಗುತ್ತದೆ. ಕೆಲವು ಸಂದರ್ಭಗಳಲ್ಲಿ ಜಾತಿವಾರು, ಪ್ರಾಂತ್ಯವಾರು ನೋಡುವುದು ಕಷ್ಟ ಆಗುತ್ತದೆ. ಅನಿವಾರ್ಯವಾಗಿ ಕೆಲವು ಕಡೆ ಜಾಸ್ತಿ ಆಗುತ್ತದೆ. ಮುಂದಿನ ದಿನಗಳಲ್ಲಿ ಮೈಸೂರು ಭಾಗಕ್ಕೂ ಸ್ಥಾನ ಸಿಗಬಹುದು ಎಂದು ಆಶಯ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News