ಶಿವಮೊಗ್ಗ: ಶಶಿಕಲಾ ಜೊಲ್ಲೆಯನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಒತ್ತಾಯಿಸಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

Update: 2021-08-05 17:21 GMT

ಶಿವಮೊಗ್ಗ,ಆ.4: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಶಶಿಕಲಾ ಜೊಲ್ಲೆ ಅವರಿಗೆ ಸಚಿವ ಸ್ಥಾನ ನೀಡಿರುವುದನ್ನು ವಿರೋಧಿಸಿ ಹಾಗೂ ಸಚಿವ ಸ್ಥಾನದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮೊಟ್ಟೆಗಳನ್ನು ಪ್ರದರ್ಶಿಸುವುದರ ಮೂಲಕ ವಿನೂತನವಾಗಿ  ಪ್ರತಿಭಟನೆ ನಡೆಸಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ಅವರು ಮಕ್ಕಳು ಮತ್ತು ಮಹಿಳೆಯರಿಗೆ ಅಪೌಷ್ಠಿಕತೆಯನ್ನು ದೂರ ಮಾಡಲು ಸರ್ಕಾರದಿಂದ ಉಚಿತವಾಗಿ ಮೊಟ್ಟೆ ನೀಡುವ ಟೆಂಡರ್ ಹಂಚಿಕೆಯಲ್ಲಿ ಲಂಚ ಪಡೆದಿರುವುದು ಸ್ಪಷ್ಟವಾಗಿ ಜಗಜ್ಜಾಹೀರಾತದ ನಂತರವೂ ನೂತನ ಸಚಿವ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನ ನೀಡಿರುವುದು ಬಿಜೆಪಿ ಪಕ್ಷದ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಶಶಿಕಲಾ ಜೊಲ್ಲೆ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಬಿಜೆಪಿ ಎಂದರೆ ಭ್ರಷ್ಟಾಚಾರದ ಜನತೆ ಪಾರ್ಟಿ ಎಂಬುದನ್ನು ರಾಜ್ಯದ ಜನತೆಗೆ ಮನವರಿಕೆ ಮಾಡಿಕೊಟ್ಟಿದೆ. ನೂತನ ಮುಖ್ಯಮಂತ್ರಿಯವರು ಅಧಿಕಾರ ವಹಿಸಿಕೊಂಡ ನಂತರ ಭ್ರಷ್ಟಾಚಾರಕ್ಕೆ ಲಗಾಮು ಬೀಳುತ್ತದೆ ಎಂಬ ಜನರ ನಿರೀಕ್ಷೆ ಸುಳ್ಳಾಗಿ ಮುಖ್ಯಮಂತ್ರಿ ಕೂಡ ಭ್ರಷ್ಟಾಚಾರಿಗಳ ಪರವಾಗಿ ನಿಂತಿದ್ದಾರೆ ಎಂಬುದು ಸಾಬೀತಾಗಿದೆ ಎಂದು ದೂರಿದರು.
ಬಿಜೆಪಿ ಹೈಕಮಾಂಡ್ ಕೂಡಲೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಶಶಿಕಲಾ ಜೊಲ್ಲೆ ಅವರಿಗೆ ಸಚಿವ ಸ್ಥಾನದಿಂದ ಕೆಳಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಮೇಹಕ್ ಶರೀಫ್, ರೇಖಾ ರಂಗನಾಥ್, ಹೆಚ್.ಸಿ.ಯೋಗೀಶ್, ಮಹಿಳಾ ಕಾಂಗ್ರೆಸ್ ಪ್ರಮುಖರಾದ ಸೇಲ್ವಾ ಮಾರ್ಟಿಸ್, ರೇಷ್ಮಾ, ಸಂಧ್ಯ, ಸುವರ್ಣನಾಗರಾಜ್, ಗೀತಾ ಹಾಗೂ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News