8ನೆ ತರಗತಿಗಾಗಿ ಪ್ರವೇಶ ಬಯಸುವ ರಾಜ್ಯದ ಬಾಲಕರಿಗೆ ಅರ್ಹತಾ ಪ್ರವೇಶ ಪರೀಕ್ಷೆ
ಬೆಂಗಳೂರು, ಆ. 5: ಜುಲೈ 2022ನೆ ಅಧಿವೇಶನಕ್ಕಾಗಿ ಉತ್ತರಾಖಂಡ ರಾಜ್ಯದ ಡೆಹರಾಡೂನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿಗೆ 8ನೆ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ 2021ರ ಡಿಸೆಂಬರ್ 18ರಂದು ನಡೆಸಲಾಗುವುದು.
ಅಭ್ಯರ್ಥಿಗಳು ಯಾವುದೇ ಸರಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 7ನೆ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ 2022ರ ಜುಲೈ 2ರಂತೆ 11/12 ವರ್ಷದಿಂದ 13 ವರ್ಷದೊಳಗಿರುವ ಬಾಲಕರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಿರುತ್ತಾರೆ. ಈ ಸಂಸ್ಥೆಯ ಮುಖ್ಯ ಗುರಿ ಯುವಕರನ್ನು ದೇಶದ ಸಶಸ್ತ್ರ ಪಡೆಗೆ ಸೇರಲು ಸಿದ್ಧಗೊಳಿಸುವುದು ಹಾಗೂ ಈ ನಿಟ್ಟಿನಲ್ಲಿ ಯುವಕರಿಗೆ ಸರ್ವ ರೀತಿಯ ವಿದ್ಯಾಭ್ಯಾಸ/ತರಬೇತಿ ನೀಡುವುದು.
ಕಾಲೇಜಿನಲ್ಲಿ ವರ್ಷವೊಂದಕ್ಕೆ ಪ್ರಸಕ್ತ ವಿದ್ಯಾಭ್ಯಾಸ ಶುಲ್ಕ (ಸಾಮಾನ್ಯ ವರ್ಗ) 1,07500 ರೂ.ಹಾಗೂ (ಎಸ್ಸಿ/ಎಸ್ಟಿ) 93,900 ರೂ.ಗಳು ಆಗಿರುತ್ತದೆ. ಈ ಶುಲ್ಕವು ಕಾಲಕಾಲಕ್ಕೆ ಹೆಚ್ಚಾಗಬಹುದು. ವಿದ್ಯಾರ್ಥಿಯು ಪ್ರವೇಶ ನೀಡುವಾಗ 30 ಸಾವಿರ ರೂ. ಭದ್ರತಾ ಠೇವಣಿ ನೀಡಬೇಕಾಗುತ್ತದೆ. ಈ ಮೊತ್ತವನ್ನು ವಿದ್ಯಾರ್ಥಿಯು ಪದವೀಧರನಾದ ಬಳಿಕ ಹಿಂತಿರುಗಿಸಲಾಗುವುದು.
ಅರ್ಜಿ ನಮೂನೆಗಳನ್ನು ಹಾಗೂ ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕವನ್ನು, ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜು, ಗರಹಿ ಕ್ಯಾಂಟ್, ಡೆಹ್ರಾಡೂನ್, ಉತ್ತರಾಖಂಡ್, ಪಿನ್ ನಂ: 248003 ಮೂಲಕ ಪಡೆಯಬಹುದು.
ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ., ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 555 ರೂ. ಆನ್‍ಲೈನ್ ಪಾವತಿ ಮಾಡುವ ಮೂಲಕ ಪ್ರಾಸ್ಪೆಕ್ಟಸ್ ಕಮ್ ಅಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕಗಳನ್ನು ಪಡೆಯಬಹುದು. ವೆಬ್‍ಸೈಟ್ ವಿಳಾಸ www.rimc.gov.in ಗೆ ಲಾಗಿಇನ್ ಆಗಿ ಶುಲ್ಕ ಪಾವತಿಸಿದ ನಂತರ ಪ್ರಾಸ್ಪೆಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕಗಳನ್ನು ಸ್ಪೀಡ್ ಪೋಸ್ಟ್ ಮೂಲಕ ರವಾನಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-2558 9459 ಅಥವಾ ಸಮೀಪದಲ್ಲಿರುವ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.