ಝಮೀರ್ ಅಹ್ಮದ್ ಮನೆ ಮೇಲೆ ಈ.ಡಿ. ದಾಳಿ ಡಿಕೆಶಿ ಮಾಡಿಸಿರಬಹುದು: ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು, ಆ.6: ಶಾಸಕ ಝಮೀರ್ ಅಹ್ಮದ್ ಖಾನ್ ಪದೇ ಪದೇ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳುತ್ತಿದ್ದುದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಅಜೀರ್ಣವಾಗಿ ಅವರೇ ಝಮೀರ್ ಅಹ್ಮದ್ ಮನೆ ಮೇಲೆ ಈ.ಡಿ. ದಾಳಿ ಮಾಡಿಸಿರಬಹುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಝಮೀರ್ ಪದೇ ಪದೇ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೇಳುತ್ತಿರುವುದು ಡಿ.ಕೆ.ಶಿವಕುಮಾರ್ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನಿಸುತ್ತದೆ. ಹಾಗಾಗಿ ಅವರೆ ಐಟಿ, ಈ.ಡಿ. ದಾಳಿ ಮಾಡಿಸಿರಬಹುದು ಎಂದು ನಾವು ಅವರತ್ತ ಬೆರಳು ಮಾಡಬಹುದಲ್ಲವೇ ಎಂದು ಬಿಜೆಪಿಯವರು ಈ.ಡಿ. ದಾಳಿ ಮಾಡಿಸಿದ್ದಾರೆ ಎಂಬ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದರು.
ಐಟಿ, ಈ.ಡಿ. ಸುಮ್ಮನೆ ದಾಳಿ ಮಾಡುವುದಿಲ್ಲ. ಐಎಂಎ ಸಂಸ್ಥೆ ಜೊತೆಯಲ್ಲಿ ಝಮೀರ್ ಗೆ ಸಂಪರ್ಕ ಇತ್ತು ಎಂದು ಕಾಣುತ್ತದೆ. ಅದರ ಆಧಾರದ ಮೇಲೆ ದಾಳಿ ಮಾಡಿದ್ದಾರೆ. ಇವರು ಸರಿಯಾಗಿದ್ದರೆ ಐಟಿ ಆಗಲಿ ಈ.ಡಿ.ಯಾಗಲಿ ಯಾವುದೇ ತನಿಖೆಗೆ ಹೆದರುವ ಅವಶ್ಯಕತೆ ಇಲ್ಲ. ಹಾಗಾಗಿ ಇದರಲ್ಲಿ ರಾಜಕೀಯ ಬೆರೆಸಬಾರದು ಎಂದು ಹೇಳಿದರು.