×
Ad

ಸಿಗದ ಆ್ಯಂಬುಲೆನ್ಸ್: ಮಧ್ಯರಾತ್ರಿ ಕಾಡಿನ ದಾರಿಯಾಗಿ ಜೋಕಾಲಿಯಲ್ಲಿ 8 ಕಿ.ಮೀ. ದೂರ ಮೃತದೇಹ ಹೊತ್ತೊಯ್ದ ಗ್ರಾಮಸ್ಥರು

Update: 2021-08-06 14:09 IST

ಚಾಮರಾಜನಗರ, ಆ.6: ಮಹಿಳೆಯೊಬ್ಬರು ಕೆಎಸ್ಸಾರ್ಟಿಸಿ ಬಸ್ಸಿನಿಂದ ಆಕಸ್ಮಿಕವಾಗಿ ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಸಂಭವಿಸಿದೆ. ದುರಂತ ಸಾವು ಕಂಡ‌ ಮಹಿಳೆಯ ಮೃತದೇಹ ಸಾಗಾಟಕ್ಕೆ ಆ್ಯಂಬುಲೆನ್ಸ್ ಸೇವೆ ಸಿಗದ ಕಾರಣ ಗ್ರಾಮಸ್ಥರು ಜೋಕಾಲಿ ರಚಿಸಿ ಅದರಲ್ಲಿ ಮೃತದೇಹವನ್ನಿರಿಸಿ ತಡರಾತ್ರಿ ಕಾಡಿನ ದಾರಿಯಲ್ಲಿ ಸುಮಾರು 8 ಕಿ.ಮೀ. ದೂರ ಹೊತ್ತುಕೊಂಡೇ ಸಾಗಿಸಿರುವುದು ವರದಿಯಾಗಿದೆ.

ಬೆಟ್ಟದ ಹಳೆಯೂರು ಗ್ರಾಮದ ನಿವಾಸಿ ಕುಳ್ಳಮಾದಿ (50) ಮೃತಪಟ್ಟ ಮಹಿಳೆ. ಸಂಬಂಧಿಕರ ಮನೆಗೆ ಬಂದಿದ್ದ ಕುಳ್ಳಮಾದಿ ಅವರು ಮಹದೇಶ್ವರ ಬೆಟ್ಟದಿಂದ ಕೆಎಸ್ಸಾರ್ಟಿಸಿ ಬಸ್​ನಲ್ಲಿ ಗುರುವಾರ ಸಂಜೆ 4:30ಕ್ಕೆ ವಡಕೆಹಳ್ಳಕ್ಕೆ ಹೊರಟಿದ್ದರು. ಈ ಬಸ್​ ಮೈಸೂರು ಹಾಗೂ ಕೆ.ಆರ್.ಪೇಟೆ ಮಾರ್ಗದತ್ತ ಹೊರಟಿತ್ತು. ಬಸ್​ ಸಂಚರಿಸುತ್ತಿರುವಾಗಲೇ ವಾಂತಿ ಬರುತ್ತಿದೆ ಎಂದು ಕುಳ್ಳಮಾದಿ ಬಸ್​ನ ಬಾಗಿಲ ಬಳಿ ತೆರಳಿದ್ದಾಳೆ. ಬೆಟ್ಟದ ಶನೇಶ್ವರಸ್ವಾಮಿ ದೇವಸ್ಥಾನದ ತಿರುವಿನಲ್ಲಿ ಬಸ್​ನಿಂದ ಆಯತಪ್ಪಿ ಕೆಳಗೆ ಬಿದ್ದ ಕುಳ್ಳಮಾದಿ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಬಳಿಕ ಬಸ್ ಚಾಲಕ ಹಾಗೂ ಸಿಬ್ಬಂದಿ ಅದೇ ಬಸ್ಸಿನಲ್ಲಿ ಮೃತದೇಹವನ್ನು ಮಹದೇಶ್ವರಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿ ಮರಣೋತ್ತ ಪರೀಕ್ಷೆ ನಡೆಸಿದ ಆಸ್ಪತ್ರೆ ವೈದ್ಯರು ಮೃತದೇಹವನ್ನು ರಾತ್ರಿಯೇ  ಕುಟಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಕಾಂಡಚಿನ ಭಾಗದಲ್ಲಿ ಇರುವ ಹಳೇಯೂರು ಗ್ರಾಮಕ್ಕೆ ಮೃತದೇಹ ಕೊಂಡೊಯ್ಯಬೇಕಿದ್ದರಿಂದ 108 ಆ್ಯಂಬುಲೆನ್ಸ್ ಗೆ ಕರೆ ಮಾಡಿರೂ ಸೇವೆ ಲಭ್ಯವಾಗಿಲ್ಲ. ಪ್ರಾಥಮಿಕ ಆರೋಗ್ಯ ತುರ್ತು ವಾಹನ ಇದ್ದರೂ‌ ಚಾಲಕನಿರಲಿಲ್ಲ ಎನ್ನಲಾಗಿದೆ. ಕೊನೆಗೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಮೃತದೇಹವನ್ನು ಬಟ್ಟೆಯ ನೆನೆಯಲ್ಲಿ ಜೋಕಾಲಿ ಕಟ್ಟಿಕೊಂಡು ಹೆಗಲ ಮೇಲೆ ಹೊತ್ತು ರಾತ್ರಿ ಸುಮಾರು 8 ಕಿ.ಮೀ. ಕಾಲ್ನಡಿಗೆಯಲ್ಲೇ ಗ್ರಾಮ ತಲುಪಿದ್ದಾರೆ.

ಮಲೆಮಹದೇಶ್ವರ ಬೆಟ್ಟದ ಪ್ರಾಥಮಿಕ‌ ಆರೋಗ್ಯ ಕೇಂದ್ರದಲ್ಲಿ ಆ್ಯಂಬುಲೆನ್ಸ್​ ಇದ್ದರೂ ಸೇವೆ ಲಭ್ಯವಿಲ್ಲ ಎನ್ನುವ ಮೂಲಕ ಅಲ್ಲಿನ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News