×
Ad

ರಾಜ್ಯಾದ್ಯಂತ ನೈಟ್ ಕರ್ಫ್ಯೂ, ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ: ಮಾರ್ಗ ಸೂಚಿ ಪ್ರಕಟ

Update: 2021-08-06 19:55 IST

ಬೆಂಗಳೂರು, ಆ. 6: `ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಕರ್ನಾಟಕ ರಾಜ್ಯದ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಕೊಡಗು, ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದಲೇ `ವೀಕೆಂಡ್ ಕರ್ಫ್ಯೂ'ವನ್ನು ಜಾರಿಗೊಳಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

ಶುಕ್ರವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ನಿಯಂತ್ರಣ ಸಂಬಂಧದ ಟಾಸ್ಕ್‍ಫೋರ್ಸ್ ಸಭೆಯ ಬಳಿಕ ಮಾತನಾಡಿದ ಅವರು, `ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಕಫ್ರ್ಯೂ ಜಾರಿ ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೆ, ರಾಜ್ಯಾದ್ಯಂತ ನೈಟ್ ಕರ್ಫ್ಯೂ ವನ್ನು ರಾತ್ರಿ 10ಗಂಟೆಯ ಬದಲಿಗೆ ರಾತ್ರಿ 9ಗಂಟೆಯಿಂದ ಬೆಳಗ್ಗೆ 5ಗಂಟೆಯ ವರೆಗೆ ಜಾರಿಗೊಳಿಸಲು ನಿರ್ಧರಿಸಲಾಗಿದೆ' ಎಂದು ತಿಳಿಸಿದರು.

ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ: ಮಾರ್ಗ ಸೂಚಿ 

ಮಹಾರಾಷ್ಟ್ರದ ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ ಹಾಗೂ ಕೇರಳದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ 9ಗಂಟೆಯಿಂದಲೇ ಸೋಮವಾರ ಬೆಳಗ್ಗೆ 5ಗಂಟೆಯ ವರೆಗೆ ವಾರಂತ್ಯದ ಕಫ್ರ್ಯೂ ಜಾರಿಯಲ್ಲಿರಲಿದೆ. ಮಾರ್ಗಸೂಚಿ ಪಾಲಿಸಿ ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಸೇರಿದಂತೆ ಇತರೆ ಧಾರ್ಮಿಕ ಸ್ಥಳಗಳಲ್ಲಿ ಪೂಜೆ, ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ. ಆದರೆ, ಜಾತ್ರೆ ಮತ್ತು ಉತ್ಸವಗಳಿಗೆ ಅವಕಾಶವಿಲ್ಲ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.

ಮಧ್ಯಾಹ್ನ 2ಗಂಟೆಯ ವರೆಗೆ ದಿನಸಿ ಖರೀದಿಗೆ ಅವಕಾಶ: `ವಾರಾಂತ್ಯದ ಕಫ್ರ್ಯೂ ಸಂದರ್ಭದಲ್ಲಿ ಆಹಾರ, ದಿನಸಿ ಸಾಮಗ್ರಿ, ಹಣ್ಣು, ತರಕಾರಿ, ಮೀನು, ಮಾಂಸ, ಡೈರಿ ಉತ್ಪನ್ನಗಳ ಬೂತ್ ಮತ್ತು ಪಶು ಆಹಾರ ಮಾರಾಟ ಮಳಿಗೆಗಳು ಬೆಳಗ್ಗೆ 5ಗಂಟೆಯಿಂದ ಮಧ್ಯಾಹ್ನ 2ಗಂಟೆಯ ವರೆಗೆ ಅವಕಾಶ ನೀಡಲಾಗಿದೆ. ಬೀದಿ ಬದಿಯ ವ್ಯಾಪಾರಕ್ಕೆ ಬೆಳಗ್ಗೆ 5ರಿಂದ ಮಧ್ಯಾಹ್ನ 2ಗಂಟೆಯ ವರೆಗೆ ಮಾತ್ರ ಅನುಮತಿಸಲಾಗಿದೆ. ಮದ್ಯ ಖರೀದಿಸಿ ಮನೆಗೆ ಕೊಂಡೊಯ್ಯಲು ಹಾಗೂ ಪಡಿತರ ವಿತರಣೆಗೆ ಮಧ್ಯಾಹ್ನ 2ಗಂಟೆಯ ವರೆಗೆ ಅವಕಾಶ ನೀಡಲಾಗಿದೆ. ಹೊಟೇಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶವಿದೆ. 

ಎಲ್ಲ ರಾಜ್ಯ ಮತ್ತು ಕೇಂದ್ರ ಸರಕಾರಿ ಕಚೇರಿ ಅಧಿಕಾರಿ/ಸಿಬ್ಬಂದಿ ಸಹಿತ ಅಗತ್ಯ ಸೇವೆಗಳ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಎಲ್ಲ ಕೈಗಾರಿಕೆ, ಕಂಪೆನಿ ಸಿಬ್ಬಂದಿ ಮತ್ತು ಕಾರ್ಮಿಕರು ಗುರುತಿನ ಚೀಟಿ ತೋರಿಸಿ ಸಂಚರಿಸಬಹುದಾಗಿದೆ. ವಿಮಾನ ಹಾಗೂ ರೈಲ್ವೆ ನಿಲ್ದಾಣಕ್ಕೆ ರಿಕ್ಷಾ ಮತ್ತು ಟ್ಯಾಕ್ಸಿಗಳಲ್ಲಿ ತೆರಳಬಹುದಾಗಿದೆ. ಆದರೆ, ಪ್ರಯಾಣದ ಟಿಕೆಟ್ ತೋರಿಸಬೇಕು. ಸರಕಾರ ಮತ್ತು ಖಾಸಗಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮದುವೆ ಮತ್ತು ಕುಟುಂಬದ ಸಮಾರಂಭಗಳಲ್ಲಿ 100 ಮಂದಿ ಮಿತಿಯಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ನಡೆಸಲು ಅವಕಾಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News