ಅಗ್ನಿಪರೀಕ್ಷೆ ಎದುರಿಸಿ ಬಂದಿದ್ದೇನೆ: ಸಚಿವೆ ಶಶಿಕಲಾ ಜೊಲ್ಲೆ

Update: 2021-08-06 16:09 GMT

ನಿಪ್ಪಾಣಿ, ಆ.6: ಮಾಡದ ತಪ್ಪಿಗೆ ಅಗ್ನಿಪರೀಕ್ಷೆ ಎದುರಿಸಿ ಬಂದಿದ್ದೇನೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ನಿಪ್ಪಾಣಿ ಕ್ಷೇತ್ರಕ್ಕೆ ಸಚಿವರಾಗಿ ಮೊದಲಬಾರಿಗೆ ಆಗಮಿಸಿ ಪಕ್ಷದ ಕಚೇರಿಗೆ ಭೇಟಿ ಮಾಡಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಿತ್ತೂರು ಚೆನ್ನಮ್ಮ ಒಬ್ಬ ಮಹಿಳೆಯಾಗಿ ಬ್ರಿಟೀಷರ ಕಾಲದಲ್ಲಿ ಜರತಾರಿ ಸೀರೆಯುಟ್ಟು ಕೈಯಲ್ಲಿ ಚಿನ್ನದ ಬಳಿ ತೊಟ್ಟು ಅರಮನೆಯಲ್ಲಿ ಇರಬೇಕಾದ ಮಹಿಳೆ ತನ್ನ ರಾಜ್ಯದ ಪ್ರಜೆಗಳಿಗಾಗಿ ಹೋರಾಟ ಮಾಡಿದ್ದಳು. ಸಂಗೊಳ್ಳಿ ರಾಯಣ್ಣ, ಶಿವಾಜಿ ಮಹಾರಾಜರು, ಬಸವಣ್ಣನವರು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಾವೆಲ್ಲ ನೆನೆಸಬೇಕಾಗುತ್ತದೆ ಎಂದು ಹೇಳಿದರು. 

ನಾನು ಒಬ್ಬ ಹೆಣ್ಣು ಮಗಳಾಗಿ ಇಷ್ಟು ದೊಡ್ಡ ಸ್ಥಾನಕ್ಕೇರಲು ಕ್ಷೇತ್ರದ ಜನರ ಸಹಕಾರ, ಪಕ್ಷದ ನಾಯಕರ ಬೆಂಬಲ ಹಾಗೂ ನನ್ನ ಶ್ರಮ ಇಲ್ಲಿಗೆ ತಂದು ನಿಲ್ಲಿಸಿದೆ. ಸರ್ಕಾರ ಹಾಗೂ ಪಕ್ಷದ ನಾಯಕರು ನನ್ನ ಮೇಲೆ ಇಟ್ಟಿರುವ ಭರವಸೆಯನ್ನು ಉಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಎಲ್ಲ ಕೆಲಸವನ್ನು ನಾನೊಬ್ಬಳೇ ಮಾಡಲು ಸಾಧ್ಯವಿಲ್ಲ. ಎಲ್ಲ ಕಾರ್ಯಕರ್ತರ ಸಹಕಾರವೂ ಬೇಕಾಗುತ್ತದೆ. ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. 

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ಮತ್ತೆ ಮಂತ್ರಿ ಸ್ಥಾನ  ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ನನ್ನ ಕ್ಷೇತ್ರದಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ನಾಳೆಯಿಂದ ವಿಜಯಪುರಕ್ಕೆ ಭೇಟಿ ನೀಡಿ ಮುದ್ದೇಬಿಹಾಳ್ ಮತ್ತು ನಿಡಗುಂದಿ ತಾಲೂಕಿನಲ್ಲಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು. 

ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಇದ್ದಾಗ ಅನೇಕ ರೀತಿಯ ಶತ್ರುಗಳು ಇರುತ್ತಾರೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಈ ಬಗ್ಗೆ ಯಾವುದೇ ರೀತಿಯ ತನಿಖೆ ನಡೆಸಲಿ ನಾನು ಅದನ್ನು ಎದುರಿಸಲು ಸಿದ್ದಳಿದ್ದೇನೆ. ಆ ರೀತಿ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ. ನನ್ನ ಮೇಲೆ ಬಂದಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸಚಿವರು ಸ್ಪಷ್ಟಪಡಿಸಿದರು. 

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವ ಇಲಾಖೆ ಮತ್ತು ಜಿಲ್ಲೆ ಉಸ್ತುವಾರಿ ಕೊಡುತ್ತಾರೋ ಆ ಜಿಲ್ಲೆಯ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದು ಹೇಳಿದರು. 

ಈ ಹಿಂದೆಯೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಮರ್ಥ ಮತ್ತು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆಯಾಗಿಯೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ವಿಶ್ವಾಸ ಗಳಿಸಿಕೊಂಡು ಒಳ್ಳೆಯ ಕೆಲಸ ಮಾಡಿದ್ದೇನೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News