×
Ad

`ನಿಮ್ಮ ಹೇಳಿಕೆಯೇ ರಾಜಕೀಯ ಪ್ರೇರಿತ' ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕೆ

Update: 2021-08-06 22:05 IST

ಬೆಂಗಳೂರು, ಆ. 6: `ಸಿದ್ದರಾಮಯ್ಯ ಅವರೇ, ಶಾಸಕ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಅವರ ಮನೆ ಮೇಲೆ ನಡೆದ ಜಾರಿ ನಿರ್ದೇಶನಾಲಯ(ಈಡಿ) ದಾಳಿಯನ್ನು ರಾಜಕೀಯ ಪ್ರೇರಿತ ಎಂದು ನೀವು ಆರೋಪಿಸುತ್ತಿದ್ದೀರಿ. ಆದರೆ, `ಇಡಿ ವಿಚಾರಣೆಯಿಂದ ನೆಮ್ಮದಿಯಾಗಿದೆ' ಎಂದು ಝಮೀರ್ ಹೇಳಿದ್ದಾರೆ. ಹಾಗಾದರೆ ನಿಮ್ಮ ಹೇಳಿಕೆಯೇ ರಾಜಕೀಯ ಪ್ರೇರಿತವಲ್ಲವೇ, ಸಿದ್ದರಾಮ್ಮಯ?' ಎಂದು ಬಿಜೆಪಿ ಪ್ರಶ್ನಿಸಿದೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ `ನೂರಾರು ಕೋಟಿ ರೂ.ಲೂಟಿ ಹೊಡೆದು ಅಕ್ರಮ ಸಂಪತ್ತು ಗಳಿಸಿರುವ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಈಗ ಈಡಿ ಬಲೆಗೆ ಬಿದ್ದಿರುವುದು ಯಾರಿಗೆ ಲಾಭ ತರಬಹುದು ಎಂಬುದಕ್ಕೆ ಉತ್ತರ ಲಭಿಸಿದೆ. ಮುಂದಿನ ಚುನಾವಣೆಗಾಗಿ ಸುರಕ್ಷಿತ ಕ್ಷೇತ್ರ ಅರಸುತ್ತಿರುವ ಸಿದ್ದರಾಮಯ್ಯ ಅವರೇ ಇದರ ಸಂಪೂರ್ಣ ಫಲಾನುಭವಿಯಾಗಿದ್ದಾರೆ. ನೆಪ ಮಾತ್ರಕ್ಕೆ ಖಂಡಿಸುತ್ತಿದ್ದಾರೆ!' ಎಂದು ಟೀಕಿಸಿದೆ.

`ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಕಾಲಿಟ್ಟ ಕ್ಷಣದಲ್ಲೇ, ಪ್ರತಿಪಕ್ಷ ಸ್ಥಾನದಿಂದ ಮಲ್ಲಿಕಾರ್ಜುನ ಖರ್ಗೆಯವರನ್ನು ಖಾಲಿ ಮಾಡಿಸಿದರು. ನಂತರ ಸಿಎಂ ರೇಸ್‍ನಲ್ಲಿದ್ದ ದಲಿತ ನಾಯಕನನ್ನು ಸೋಲಿಸಿದರು. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣು ಹಾಯಿಸಿದ ಕೂಡಲೇ ಝಮೀರ್ ಅಹ್ಮದ್ ಖಾನ್ ಅಕ್ರಮ ಬೆಳಕಿಗೆ ಬಂದು ಸಂಕಟಕ್ಕೆ ಸಿಲುಕಿಕೊಂಡರು' ಎಂದು ಬಿಜೆಪಿ ದೂರಿದೆ.

`ಮೋದಿ ಸರಕಾರವು ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. 2014ರಿಂದ 2020ರ ನಡುವೆ ದೇಶದಲ್ಲಿ ಎಂಬಿಬಿಎಸ್ ಸೀಟುಗಳಲ್ಲಿ ಶೇ.56ರಷ್ಟು ಮತ್ತು ಸ್ನಾತಕೋತ್ತರ ಪದವಿ ಸೀಟುಗಳಲ್ಲಿ ಶೇ.80ರಷ್ಟು ಹೆಚ್ಚಳವಾಗಿದೆ. 2014ಕ್ಕೆ ಹೋಲಿಸಿದರೆ 2020ರಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯು 379ರಿಂದ 558ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News