ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣ ಏರಿಕೆ: 80ಕ್ಕೂ ಹೆಚ್ಚು ಅಪಾರ್ಟ್‍ಮೆಂಟ್ ಸೀಲ್‍ಡೌನ್
ಬೆಂಗಳೂರು, ಆ.6: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಇಳಿಕೆಯಾಗಿದ್ದ ಕೋವಿಡ್ ಪ್ರಕರಣಗಳು ನಿಧಾನವಾಗಿ ಏರಿಕೆಯಾಗುತ್ತಿದ್ದು, ಕೋವಿಡ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ನಗರದಲ್ಲಿ 80ಕ್ಕೂ ಅಧಿಕ ಅಪಾಟ್ಮೆರ್ಂಟ್‍ಗಳನ್ನು ಸೀಲ್ ಡೌನ್ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ.
ನಗರದಲ್ಲಿ ಒಟ್ಟು 777 ಮೈಕ್ರೋ ಕಂಟೈನ್ಮೆಂಟ್ ಝೋನ್‍ಗಳನ್ನು ಪತ್ತೆ ಮಾಡಲಾಗಿದ್ದು, ಈ ಪೈಕಿ 157 ಪ್ರದೇಶಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಸಕ್ರಿಯವಾಗಿವೆ. ಮಹದೇವಪುರದಲ್ಲಿಯೇ ಒಟ್ಟು 162 ಸೂಕ್ಷ್ಮ ಪ್ರದೇಶಗಳನ್ನು ಗುರುತು ಮಾಡಿದ್ದು, 42 ಪ್ರದೇಶಗಳು ಅತೀ ಸೂಕ್ಷ್ಮವಾಗಿವೆ.
ಪೂರ್ವ ವಲಯದಲ್ಲೂ 34 ಮೈಕ್ರೋ ಕಂಟೈನ್ಮೆಂಟ್ ಝೋನ್‍ಗಳಿವೆ. ಬೊಮ್ಮನಹಳ್ಳಿ 31, ದಕ್ಷಿಣ ವಲಯ 16, ಯಲಹಂಕ 17, ಆರ್‍ಆರ್ ನಗರ 10, ಪಶ್ಚಿಮ 5 ಹಾಗೂ ದಾಸರಹಳ್ಳಿ ವ್ಯಾಪ್ತಿಯಲ್ಲಿ 2 ಮಾತ್ರ ಮೈಕ್ರೋ ಕಂಟೈನ್ಮೆಂಟ್ ಝೋನ್‍ಗಳಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರದ ಅಪಾರ್ಟ್‍ಮೆಂಟ್‍ಗಳಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಗುಂಪು ಚಟುವಟಿಕೆಗಳನ್ನು ನಡೆಸದಂತೆ, ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಅಪಾರ್ಟ್‍ಮೆಂಟ್ ನಿವಾಸಿಗಳ ಸಂಘಕ್ಕೆ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಕೇರಳ ಮತ್ತು ಮಹಾರಾಷ್ಟ್ರದಿಂದ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದೇ ಬರುವ ಪ್ರಯಾಣಿಕರ ಸ್ವ್ಯಾಬ್ ಸಂಗ್ರಹವನ್ನು ಬಿಬಿಎಂಪಿ ಆರಂಭ ಮಾಡಿದೆ. ಬಸ್, ರೈಲು ನಿಲ್ದಾಣದಲ್ಲಿ 1800ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.