ಪ್ರಾಕೃತಿಕ ವಿಕೋಪಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಸಹಿಸಲಾಗದು: ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ
ಹಾವೇರಿ, ಆ.6: ನೆರೆ ಹಾವಳಿಯಾಗಲೀ, ಕೋವಿಡ್ ಆಗಲೀ ಅಥವಾ ಯಾವುದೇ ರೀತಿಯ ಪ್ರಾಕೃತಿಕ ವಿಕೋಪಗಳಾಗಲೀ ಈ ಬಗ್ಗೆ ಅಧಿಕಾರಿಗಳು ಯಾರಾದರೂ ಜನರಿಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಅದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಖಡಕ್ ಸೂಚನೆ ನೀಡಿದ್ದಾರೆ.
ಶುಕ್ರವಾರ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಆಡಳಿತ ಪ್ರತಿನಿಧಿಸುವ ಅಧಿಕಾರಿಗಳ ಜೊತೆ ನೆರೆಹಾವಳಿ ಮತ್ತು ಕೋವಿಡ್ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನೆರೆ ಹಾವಳಿಯಂತಹ ಪ್ರಾಕೃತಿಕ ವಿಕೋಪಗಳು ಹೇಳಿ ಕೇಳಿ ಬರುವುದಿಲ್ಲ. ಹೀಗಾಗಿ ಅಧಿಕಾರಿಗಳು ಸದಾ ಮುನ್ನೆಚ್ಚರಿಕೆಯಿಂದಲೇ ಇರಬೇಕು. ಏನಾದರೂ ಅನಾಹುತ ಸಂಭವಿಸಿದರೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಬೇಕು ಎಂದು ಅವರು ಹೇಳಿದರು.
ಅಕಾಲಿಕ ಮಳೆಯಿಂದಾಗಿ ಎರಡು ದಿನಗಳಲ್ಲಿ ಜಿಲ್ಲೆಯ ಚಿತ್ರಣವೇ ಬದಲಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ಮಾಡದೇ ಯಾವ ಯಾವ ತಾಲೂಕುಗಳಲ್ಲಿ ಏನೇನು ಕಾರ್ಯಕ್ರಮಗಳಾಗಬೇಕೆಂಬ ಬಗ್ಗೆ ಎಲ್ಲ ಇಲಾಖೆಯ ಅಧಿಕಾರಿಗಳು ಪಟ್ಟಿ ಸಿದ್ಧಪಡಿಸಬೇಕು. ಈ ಸಂಬಂಧ ಆಯಾ ತಾಲೂಕಿನ ಶಾಸಕರ ಜೊತೆ ಚರ್ಚಿಸಿ ಪಟ್ಟಿ ಮಾಹಿತಿ ಕ್ರೋಡೀಕರಿಸಿ ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
ಸರಕಾರ ನೀಡುತ್ತಿರುವ ಜನಪರ ಕಾರ್ಯಕ್ರಮಗಳನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಕೆಲಸಗಳನ್ನು ಅಧಿಕಾರಿಗಳು ಮಾಡಬೇಕು. ನೆರೆಹಾವಳಿ ಮಳೆಯಿಂದಾದ ಬೆಳೆನಷ್ಟ ಜನರಿಗಾದ ತೊಂದರೆಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಕೋವಿಡ್ ಮೂರನೇ ಅಲೆ ಬಗ್ಗೆ ತೆಗೆದುಕೊಂಡ ಮುಂಜಾಗ್ರತ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಬಿ.ಸಿ.ಪಾಟೀಲ್ ಹೇಳಿದರು.