×
Ad

ಹಾಕಿಯನ್ನು ಆರಾಧಿಸುವ ಕೊಡಗಿನ ಪ್ರತಿಭೆಗಳಿಗೆ ಪ್ರೋತ್ಸಾಹದ ಕೊರತೆ : ಬ್ರಿಜೇಶ್ ಕಾಳಪ್ಪ ವಿಷಾದ

Update: 2021-08-06 23:57 IST

ಮಡಿಕೇರಿ ಆ.6 : ನಾಲ್ಕು ದಶಕಗಳ ನಂತರ ಭಾರತೀಯ ಪುರುಷರ ಹಾಕಿ ತಂಡ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚು ಗೆಲ್ಲುವ ಮೂಲಕ ದಾಖಲೆ ಬರೆದಿದೆ. ಇದು ಅತ್ಯಂತ ಹರ್ಷದಾಯಕ ವಿಚಾರವಾಗಿದೆ, ಆದರೆ ಹಾಕಿಯನ್ನು ಮತ್ತೊಂದು ಧರ್ಮವೆಂದೇ ಆರಾಧಿಸುವ ಕೊಡಗು ಜಿಲ್ಲೆಯ ಪ್ರತಿಭೆಗಳಿಗೆ ಹಾಕಿ ತಂಡದಲ್ಲಿ ಸ್ಥಾನ ದೊರೆಯದೆ ಇರುವುದು ವಿಷಾದಕರವೆಂದು ಸುಪ್ರೀಂಕೋರ್ಟ್ ವಕೀಲ ಹಾಗೂ ಎಐಸಿಸಿ ವಕ್ತಾರ ಬೇಸರ ವ್ಯಕ್ತಪಡಿಸಿದ್ದಾರೆ.

 ಪತ್ರಿಕಾ ಪ್ರಕಟಣೆ ನೀಡಿರುವ ಅವರು ವೀರರ ನಾಡು ಕೊಡಗು ಕ್ರೀಡಾಕಲಿಗಳ ಬೀಡೆಂದು ಹೆಸರು ಗಳಿಸಿದೆ. ಹಾಕಿ ಕ್ರೀಡೆಯನ್ನು ಆರಾದಿಸುವ ಮಂದಿ ಇಲ್ಲಿದ್ದಾರೆ, ಕೊಡವ ಹಾಕಿ ಉತ್ಸವದ ಮೂಲಕ ಪ್ರತಿವರ್ಷ 4 ಸಾವಿರಕ್ಕೂ ಅಧಿಕ ಕ್ರೀಡಾ ಪ್ರತಿಭೆಗಳು ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸುತ್ತಾರೆ. ಆದರೆ ಈ ಬಾರಿಯ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಭಾರತೀಯ ಹಾಕಿ ತಂಡದಲ್ಲಿ ಕೊಡಗಿನವರು ಸ್ಥಾನ ಗಳಿಸದೆ ಇರಲು ಪ್ರೋತ್ಸಾಹದ ಕೊರತೆಯೇ ಕಾರಣವೆಂದು ಅಭಿಪ್ರಾಯಪಟ್ಟಿದ್ದಾರೆ.

 ಈಗಾಗಲೇ ವಿಶ್ವಮಟ್ಟದಲ್ಲಿ ದಾಖಲೆ ಬರೆದಿರುವ ಕೊಡವ ಹಾಕಿಹಬ್ಬಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಬಲ್ಲ ಸಾಮಥ್ರ್ಯವುಳ್ಳ ಹಾಕಿ ಪ್ರತಿಭೆಗಳು ಹೊರ ಹೊಮ್ಮಿದ್ದಾರೆ. ಸಾವಿರಾರು ಉತ್ಸಾಹಿ ಯುವ ಹಾಕಿಪಟುಗಳು ಜಿಲ್ಲೆಯಲ್ಲಿದ್ದಾರೆ. ಆದರೆ ಇವರುಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಸೃಷ್ಟಿಯಾಗುತ್ತಿಲ್ಲ. ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಇಲ್ಲಿಯವರೆಗೆ ಚಿಂತನೆಯನ್ನೇ ಹರಿಸಿಲ್ಲ. ಈಗಾಗಲೇ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ಕೊಡಗಿನ ಕ್ರೀಡಾಪ್ರತಿಭೆಗಳು ತಮ್ಮ ಸ್ವಯಂ ಸಾಮಥ್ರ್ಯದಿಂದ ಉತ್ತುಂಗಕ್ಕೇರಿದ್ದಾರೆಯೇ ಹೊರತು ಯಾರ ಸಹಕಾರವು ಇವರಿಗೆ ದೊರೆತ್ತಿಲ್ಲ.

ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಕ್ರೀಡಾಂಗಣ ಮತ್ತು ತರಬೇತುದಾರರ ಕೊರತೆಯಿದೆ, ಇರುವ ಕ್ರೀಡಾಂಗಣಗಳು ನಿರ್ವಹಣೆ ಇಲ್ಲದೆ ಕ್ರೀಡಾಪಟುಗಳ ಅಭ್ಯಾಸಕ್ಕೆ ಅಲಭ್ಯವಾಗಿದೆ. ಇಲ್ಲಿ ಇಚ್ಛಾಶಕ್ತಿಯ ಕೊರತೆ ಇದ್ದು, ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಪ್ರಾಮಾಣಿಕ ಪ್ರಯತ್ನವನ್ನು ಯಾರೂ ಮಾಡುತ್ತಿಲ್ಲವೆಂದು ಬ್ರಿಜೇಶ್ ಕಾಳಪ್ಪ ಟೀಕಿಸಿದ್ದಾರೆ.

ಒರಿಸ್ಸಾ ಮಾದರಿಯಾಗಲಿ: ಇಂದು ಹಾಕಿ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಸೃಷ್ಟಿಸಿ ಕೊಡುವುದರಲ್ಲಿ ಒರಿಸ್ಸಾ ರಾಜ್ಯ ಮಾದರಿಯಾಗಿದೆ. ಅಲ್ಲಿನ ಸರ್ಕಾರ ಹಾಕಿ ಕ್ರೀಡೆಯ ಬೆಳವಣಿಗೆಗೆ ವಿಶೇಷ ಆಸಕ್ತಿಯನ್ನು ತೋರಿದೆ. ಗುಣಮಟ್ಟದ ಕ್ರೀಡಾಂಗಣದ ನಿರ್ಮಾಣದ ಮೂಲಕ ಹಾಕಿಪಟುಗಳಿಗೆ ಸತತ ತರಬೇತಿ ಮತ್ತು ಪ್ರೋತ್ಸಾಹ ನೀಡುವ ಮೂಲಕ ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಂಡಿದೆ. ಆದರೆ ಕೊಡಗು ಜಿಲ್ಲೆಯ ಕ್ರೀಡಾಪಟುಗಳು ತಮ್ಮ ಸಾಮಥ್ರ್ಯದಿಂದಲೇ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಬೇಕಾಗಿದೆ ಹೊರತು ಸರ್ಕಾರ ಅಥವಾ ಜನಪ್ರತಿನಿಧಿಗಳು ಸ್ವಲ್ಪವೂ ಸಹಕಾರ ನೀಡುತ್ತಿಲ್ಲವೆಂದು ಅವರು ಆರೋಪಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಹಾಕಿ ಕ್ರೀಡೆಗೆ ಆದ್ಯತೆ ನೀಡಿ ಕೊಡಗು ಜಿಲ್ಲೆಯಲ್ಲಿ ರಾಷ್ಟ್ರಮಟ್ಟದ ಹಾಕಿ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು. ಅಲ್ಲದೆ ಸತತ ಅಭ್ಯಾಸಕ್ಕಾಗಿ ತರಬೇತುದಾರರನ್ನು ನೇಮಿಸಲಾಗುವುದು. ಆ ಮೂಲಕ ಜಿಲ್ಲೆಯ ಅತಿ ಹೆಚ್ಚು ಆಟಗಾರರು ಭಾರತೀಯ ಹಾಕಿ ತಂಡದಲ್ಲಿ ಸ್ಥಾನ ಪಡೆದು ಮುಂದಿನ ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಬ್ರಿಜೇಶ್ ಕಾಳಪ್ಪ ಭರವಸೆ ನೀಡಿದ್ದಾರೆ.

ಪ್ರಸ್ತುತ ಅಧಿಕಾರದಲ್ಲಿರುವ ರಾಜ್ಯ ಸರ್ಕಾರ ಕೊಡಗನ್ನು ಹಾಡಿ, ಹೊಗಳುವುದನ್ನು ಬಿಟ್ಟು ಕ್ರೀಡಾಪಟುಗಳ ಭವಿಷ್ಯ ರೂಪಿಸಲು ಅಗತ್ಯವಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News