ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ನೇಕಾರರನ್ನು ಪ್ರೋತ್ಸಾಹಿಸಿ: ಶಾಸಕ ಸಿದ್ದು ಕೆ.ಸವದಿ
ಬೆಂಗಳೂರು, ಆ. 7: `ದೇಶಿಯ ಸಾಂಪ್ರದಾಯಿಕ ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ, ಹೆಚ್ಚು ಹೆಚ್ಚಾಗಿ ಬಳಕೆ ಮಾಡುವ ಮೂಲಕ ನೇಕಾರರನ್ನು ಪ್ರೋತ್ಸಾಹಿಸಬೇಕು' ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಕೆ. ಸವದಿ ಮನವಿ ಮಾಡಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ 7ನೆ `ರಾಷ್ಟ್ರೀಯ ಕೈಮಗ್ಗ ದಿನಾಚಣೆ-2021'ರ ಕಾರ್ಯಕ್ರಮದಲ್ಲಿ ಕೈಮಗ್ಗ ನೇಕಾರರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, `ಪಾರಂಪರಿಕ ಉದ್ಯಮವಾದ ಕೈಮಗ್ಗ ಉದ್ದಿಮೆಯಲ್ಲಿ ರಾಜ್ಯದಲ್ಲಿ 35 ಸಾವಿರಕ್ಕೂ ಹೆಚ್ಚು ಕೈಮಗ್ಗಳಲ್ಲಿ ಲಕ್ಷಾಂತರ ಮಂದಿ ನೇಕಾರರು ಕೆಲಸ ನಿರ್ವಹಿಸುತ್ತಿದ್ದು, ಅವರ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ.
ಇದರಿಂದಾಗಿ ನೇಕಾರರ ಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ನೇಕಾರರ ಹಿತ ಕಾಪಾಡಲು ಸರಕಾರವು ಇಲಾಖೆಗಳಿಗೆ ಬೇಕಾದ ಬಟ್ಟೆಗಳನ್ನು ಕೈಮಗ್ಗ ಜವಳಿ ಇಲಾಖೆಯಿಂದ ನೇರವಾಗಿ ಖರೀದಿಸಲು ಮುಂದಾಗಬೇಕು. ಇದರಿಂದ ಯುವ ನೇಕಾರರನ್ನು ಪೆÇ್ರೀತ್ಸಾಹಿಸಿದಂತಾಗುತ್ತದೆ. ನೇಕಾರರ ಶ್ರೇಯೋಭಿವೃದ್ಧಿಗಾಗಿ ಒಂದು ವರ್ಷದೊಳಗೆ ನಿಗಮವನ್ನು ಲಾಭದಾಯಕ್ಕೆ ತರಲಾಗುವುದು. ನೇಕಾರರ ಹಿತ ಕಾಪಾಡಲು ಬದ್ಧರಾಗಿದ್ದು, ಸರಕಾರದಿಂದ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು' ಎಂದರು.
ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎನ್.ಶ್ರೀರಾಮ್ ಮಾತನಾಡಿ, `ಮನುಷ್ಯನಿಗೆ ಅಮೂಲ್ಯವಾಗಿರುವ ಬಟ್ಟೆಯನ್ನು, ನೇಕಾರರು ತಮ್ಮ ಕೈಚಳಕದಿಂದ ಸೃಜನಾತ್ಮಕವಾಗಿ ತಯಾರಿಸಲು ಬಹಳಷ್ಟು ಶ್ರಮವಹಿಸುತ್ತಿದ್ದಾರೆ. ಇದನ್ನು ಗಮನಿಸಿದ ಸರಕಾರವು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಹಾಯ ಒದಗಿಸುವ ಜೊತೆಗೆ ಸಾಧಕರನ್ನು ಗುರುತಿಸಿ ಪ್ರಶಸ್ತಿ ಮತ್ತು ಬಹುಮಾನ ನೀಡುತ್ತಿರುವುದರಿಂದ ಅವರಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ನೇಕಾರರಿಗೆ ಸಮಸ್ಯೆ ಉಂಟಾದರೆ ಕಚೇರಿಗೆ ಭೇಟಿ ನೀಡಿದರೆ ಸಮಸ್ಯೆಯನ್ನು ಪರಿಶೀಲಿಸಿ ಬಗೆಹರಿಸಲು ಪ್ರಯತ್ನಿಸಲಾಗುವುದು' ಎಂದು ತಿಳಿಸಿದರು.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರಕಾರದ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, `ಕೈಮಗ್ಗಕ್ಕೆ ವಿಶಿಷ್ಟ ಸ್ಥಾನವಿದ್ದು, ಸರಕಾರದಿಂದ ಎಷ್ಟು ಸಾಧ್ಯವೊ ಅಷ್ಟು ಸಹಾಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ. 50 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಆರೋಗ್ಯ ವಿಮೆ, ಜೀವ ವಿಮೆ, ಅಪಘಾತ ವಿಮೆ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುವುದರ ಜೊತೆಗೆ ಆಯುಷ್ಮಾನ್ ಯೋಜನೆಯಡಿ 1,500 ನೇಕಾರರನ್ನು ಸೇರಿಸಲು ಇತ್ತೀಚೆಗೆ ಸಭೆಯಲ್ಲಿ ಚರ್ಚಿಸಲಾಗಿದೆ' ಎಂದರು.
ಇದೇ ಸಂದರ್ಭದಲ್ಲಿ ರೇಶ್ಮೆ ವಲಯದಲ್ಲಿ ಪ್ರಥಮ ಸ್ಥಾನ ಪಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ವೆಂಕಟರವಣ ಹಾಗೂ ದ್ವಿತೀಯ ಸ್ಥಾನ ಪಡೆದ ಚಾಮರಾಜನಗರ ಜಿಲ್ಲೆಯ ಕೃಷ್ಣಮೂರ್ತಿ, ಹತ್ತಿ ಉತ್ಪನ್ನ ವಲಯದಲ್ಲಿ ಪ್ರಥಮ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆಯ ಮಲಕಪ್ಪ ಗಂಗಪ್ಪ ಮುಸರಿ, ಜಂಟಿಯಾಗಿ ದ್ವಿತೀಯ ಸ್ಥಾನ ಪಡೆದ ಧಾರವಾಡ ಜಿಲ್ಲೆಯ ಅಕ್ಕಮಹಾದೇವಿ ಕೃಷ್ಣಾ ಬೋಜೆದಾರ ಹಾಗೂ ಪರಜಾನಾ ಹಸನಸಾಬ ಶಿರಸಂಗಿ. ಉಣ್ಣೆ ಉತ್ಪನ್ನ ವಲಯದಲ್ಲಿ ಪ್ರಥಮ ಸ್ಥಾನ ಪಡೆದ ತುಮಕೂರು ಜಿಲ್ಲೆಯ ರಮೇಶ್ ಇವರಿಗೆ 2021ನೆ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.