ಮಠಾಧೀಶರದು ರಾಜಕೀಯವಲ್ಲ ಸಮುದಾಯ ನಿಷ್ಠೆ: ವೀರಭದ್ರ ಚನ್ನಮಲ್ಲ ಸ್ವಾಮೀಜಿ
ಬೆಂಗಳೂರು, ಆ.7: ಲಿಂಗಾಯತ ಮಠಾಧೀಶರು ರಾಜಕೀಯ ಮಾಡುತ್ತಿಲ್ಲ. ನಮ್ಮ ಸಮುದಾಯದ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕೆಂದು ಮನವಿ ಮಾಡಿದ್ದೆವಷ್ಟೆಯೆಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.
ಶನಿವಾರ ನಗರದ ನಿಡುಮಾಮಿಡಿ ಮಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸ್ಥಾನಕ್ಕೆ ಲಿಂಗಾಯತ ಸಮುದಾಯದ ವ್ಯಕ್ತಿಯನ್ನೇ ಮುಖ್ಯಮಂತ್ರಿ ಮಾಡಿದಕ್ಕೆ ಬಿಜೆಪಿ ವರಿಷ್ಟರಿಗೆ ಲಿಂಗಾಯತ ಮಠಾಧೀಶರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ರಚನೆಯಾಗಿದೆ. ಈಗ ಭಿನ್ನಮತಕ್ಕೆ ಅವಕಾಶ ನೀಡದಂತೆ ಮುನ್ನಡೆಯಬೇಕಾಗಿದೆ. ಸಂಪುಟದಲ್ಲಿ ಖಾಲಿಯಿರುವ ಸ್ಥಾನಗಳಿಗೆ ಹಿಂದುಳಿದ ವರ್ಗದವರಿಗೆ ಪ್ರಾತಿನಿಧ್ಯ ನೀಡಬೇಕು. ಕೇಂದ್ರ ಸರಕಾರ ರಾಜ್ಯಕ್ಕೆ ಅನುದಾನ ನೀಡುವಲ್ಲಿ ತೋರುತ್ತಿರುವ ತಾರತಮ್ಯ ಸರಿಪಡಿಸುವುದರ ಕಡೆಗೆ ರಾಜ್ಯ ಸರಕಾರ ಮುನ್ನಡೆಯಲಿ. ಹಾಗೂ ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಭ್ರಷ್ಟಾಚಾರಕ್ಕೆ ಕೂಡಲೇ ಕಡಿವಾಣ ಹಾಕಬೇಕೆಂದು ಅವರು ಹೇಳಿದ್ದಾರೆ.
ಲಿಂಗಾಯತ ಮಠಾಧೀಶರು ಬಿ.ಎಸ್.ಯಡಿಯೂರಪ್ಪ ಪರ ನಿಂತ ಏಕೈಕ ಕಾರಣಕ್ಕೆ ನಮ್ಮ ವಿರುದ್ಧ ಆರೋಪಗಳು ಕೇಳಿ ಬರುತ್ತಿವೆ. ನಾವ್ಯಾರು ವೈಯಕ್ತಿಕ ಸ್ವಾರ್ಥಕ್ಕಾಗಿ ಮಾಡಿದಲ್ಲ. ನಾಡಿನ ಪ್ರಗತಿಯ ದೃಷ್ಟಿಯಿಂದ ಯಡಿಯೂರಪ್ಪ ಪರವಾಗಿ ನಿಲ್ಲಬೇಕಾಯಿತು. ಇದನ್ನೇ ಮಾಧ್ಯಮಗಳು ಮಠದ ರಾಜಕೀಯ ಎಂಬಂತೆ ಬಿಂಬಿಸಿದವು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.