ನೀರಜ್ ಛೋಪ್ರಾಗೆ ತರಬೇತಿ ನೀಡಿದ ಕನ್ನಡಿಗ ಕಾಶಿನಾಥ್ ನಾಯ್ಕ್ ಗೆ 10 ಲಕ್ಷ ರೂ. ಘೋಷಿಸಿದ ಸಚಿವ ನಾರಾಯಣಗೌಡ

Update: 2021-08-08 11:38 GMT
Photo credit: deccanherald.com

ಬೆಂಗಳೂರು, ಆ. 8: ಟೋಕಿಯೊ ಒಲಿಂಪಿಕ್‍ನಲ್ಲಿ ಜಾವೆಲಿನ್(ಈಟಿ) ಎಸೆತದಲ್ಲಿ ಚಿನ್ನಕ್ಕೆ ಕೊರಳೊಡ್ಡಿದ ನೀರಜ್ ಛೋಪ್ರಾಗೆ ಅಭಿನಂದನೆ ಸಲ್ಲಿಸಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ, ಈ ಸಾಧನೆಗೆ ತರಬೇತಿ ನೀಡಿದ ಶಿರಸಿಯ ಕಾಶಿನಾಥ್ ನಾಯ್ಕ್ ಅವರಿಗೆ 10ಲಕ್ಷ ರೂ.ನಗದು ಬಹುಮಾನ ಘೋಷಿಸಿದ್ದಾರೆ.

ನೀರಜ್ ಛೋಪ್ರಾ ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ಕನ್ನಡಿಗನ ಪಾತ್ರವೂ ಇದೆ. ಛೋಪ್ರಾಗೆ ತರಬೇತಿ ನೀಡಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾಶಿನಾಥ್ ನಾಯ್ಕ್. 2010ರ ಕಾಮನ್ವೆಲ್ತ್ ನಲ್ಲಿ ಕಾಶಿನಾಥ್ ಈಟಿ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದರು. ಅತ್ಯುತ್ತಮ ಕ್ರೀಡಾ ಸಾಧಕ ಕಾಶಿನಾಥ್ ಗರಡಿಯಲ್ಲಿ ಪಳಗಿದ ನೀರಜ್ ಸ್ವರ್ಣಪದಕ ಗಳಿಸಿ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ. ಇಂತಹ ಸಾಧನೆಗೆ ಬೆನ್ನೆಲುಬಾದ ಕನ್ನಡಿಗ ಕಾಶಿನಾಥ್ ನಾಯ್ಕ್ ಅವರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 10 ಲಕ್ಷ ರೂ. ನಗದು ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.

ದೇಶದ ಕೀರ್ತಿ ಪತಾಕೆ ಹಾರಿಸಿದ ಕ್ರೀಡಾ ಸಾಧಕರಿಗೆ ಸನ್ಮಾನ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅಮೋಘ ಸಾಧನೆಗೈದ ಭಾರತದ 7 ಕ್ರೀಡಾಪಟುಗಳನ್ನು ರಾಜ್ಯ ಸರಕಾರದ ವತಿಯಿಂದ ಸನ್ಮಾನಿಸಲಾಗುವುದು. ಈಗಾಗಲೆ ಸಿಎಂ ಜೊತೆ ಚರ್ಚೆ ನಡೆಸಿರುವ ಸಚಿವ ನಾರಾಯಣಗೌಡ, ಎಲ್ಲ ಕ್ರೀಡಾಪಟುಗಳನ್ನು ಆಹ್ವಾನಿಸಿ ಗೌರವಿಸಲು ತೀರ್ಮಾನಿಸಿದ್ದಾರೆ. ಇದೇ ಸಂದರ್ಭದಲ್ಲಿ ತರಬೇತುದಾರ ಕಾಶಿನಾಥ್ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ರಾಜ್ಯದ ಕ್ರೀಡಾಪಟುಗಳಿಗೂ ಗೌರವ: ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುವುದೂ ಒಂದು ದೊಡ್ಡ ಸಾಧನೆಯೆ ಆಗಿದೆ. ಟೋಕಿಯೋ ಒಲಿಂಪಿಕ್‍ನಲ್ಲಿ ಮೂವರು ಕನ್ನಡಿಗರು ಪಾಲ್ಗೊಂಡು ಉತ್ತಮ ಸಾಧನೆ ತೋರಿದ್ದಾರೆ. ಪದಕ ಗಳಿಸಿದ ಕ್ರೀಡಾ ಸಾಧಕರನ್ನು ಗೌರವಿಸಿದಂತೆಯೆ ರಾಜ್ಯದ ಹೆಮ್ಮೆಯ ಕ್ರೀಡಾಪಟುಗಳಾದ ಅಶೋಕ್, ಶ್ರೀಹರಿ ನಟರಾಜ್, ಫೌವಾದ್ ಮಿರ್ಜಾ ಅವರನ್ನೂ ಸನ್ಮಾನಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News