ಪ್ರತಿಯೊಂದು ಮಗುವಿಗೂ ತನ್ನ ತಾಯಿಯ ಉಪನಾಮ ಬಳಸಲು ಹಕ್ಕಿದೆ:‌ ದಿಲ್ಲಿ ಹೈಕೋರ್ಟ್

Update: 2021-08-08 16:50 GMT

ಹೊಸದಿಲ್ಲಿ,ಆ.8: ಪ್ರತಿಯೊಂದು ಮಗುವಿಗೂ ತನ್ನ ತಾಯಿಯ ಉಪನಾಮ ಅಥವಾ ಅಡ್ಡಹೆಸರನ್ನು ಬಳಸುವ ಹಕ್ಕು ಇದೆ ಮತ್ತು ಈ ವಿಷಯದಲ್ಲಿ ತನ್ನ ನಿರ್ಧಾರವನ್ನು ಹೇರಲು ತಂದೆಗೆ ಯಾವುದೇ ಹಕ್ಕು ಇಲ್ಲ ಎಂದು ಮಹತ್ವದ ತೀರ್ಪೊಂದರಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯವು ಹೇಳಿದೆ.

ಅಧಿಕೃತ ದಾಖಲೆಗಳಲ್ಲಿ ತನ್ನ ಉಪನಾಮವನ್ನೇ ತನ್ನ ಅಪ್ರಾಪ್ತ ವಯಸ್ಕ ಪುತ್ರಿಯ ಉಪನಾಮವನ್ನಾಗಿ ತೋರಿಸಬೇಕೇ ಹೊರತು ಆಕೆಯ ತಾಯಿಯ ಉಪನಾಮವನ್ನಲ್ಲ ಎಂದು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶ ನೀಡುವಂತೆ ಕೋರಿ ವ್ಯಕ್ತಿಯೋರ್ವ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.

ತನ್ನ ವಿಚ್ಛೇದಿತ ಪತ್ನಿಯು ಶ್ರೀವಾಸ್ತವ ಎಂದಿದ್ದ ಪುತ್ರಿಯ ಉಪನಾಮವನ್ನು ಸಕ್ಸೇನಾ ಎಂದು ಬದಲಿಸಿದ್ದಾಳೆ. ತಾನು ತನ್ನ ಉಪನಾಮದೊಂದಿಗೆ ಪುತ್ರಿಯ ಹೆಸರಿನಲ್ಲಿ ಜೀವವಿಮಾ ಪಾಲಿಸಿಯನ್ನು ಪಡೆದಿರುವುದರಿಂದ ಈ ಬದಲಾವಣೆಯಿಂದ ವಿಮಾ ಹಕ್ಕು ಕೋರಿಕೆಯು ಕಷ್ಟವಾಗುತ್ತದೆ ಎಂದು ವ್ಯಕ್ತಿ ತನ್ನ ಅರ್ಜಿಯಲ್ಲಿ ವಾದಿಸಿದ್ದ.
 
ಆದರೆ ಅರ್ಜಿಯನ್ನು ತಿರಸ್ಕರಿಸಿದ ನ್ಯಾ.ರೇಖಾ ಪಲ್ಲಿ ಅವರು,ಪುತ್ರಿ ತನ್ನ ಉಪನಾಮವನ್ನೇ ಬಳಸಬೇಕೆಂದು ಆದೇಶಿಸಲು ತಂದೆಯು ಆಕೆಯನ್ನು ಹೊಂದಿಲ್ಲ. ಅಪ್ರಾಪ್ತ ವಯಸ್ಕ ಪುತ್ರಿ ತನ್ನ ಉಪನಾಮದೊಂದಿಗೆ ಸಂತೋಷವಾಗಿದ್ದರೆ ನಿಮಗೆ ಸಮಸ್ಯೆಯೇನು ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅರ್ಜಿದಾರನ ಪರ ವಕೀಲ ಅನುಜಕುಮಾರ್ ರಂಜನ್ ಅವರು, ಬಾಲಕಿಯು ಅಪ್ರಾಪ್ತವಯಸ್ಕಳಾಗಿರುವುದರಿಂದ ತಾನಾಗಿಯೇ ಈ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ವಾದಿಸಿದರಾದರೂ ನ್ಯಾಯಾಲಯವು ಅದನ್ನು ಪುರಸ್ಕರಿಸಲಿಲ್ಲ.
ಜೀವವಿಮಾ ಕೋರಿಕೆ ಅಮಾನ್ಯಗೊಳ್ಳುತ್ತದೆ ಎಂಬ ಆತಂಕವು ತಪ್ಪುಗ್ರಹಿಕೆಯಾಗಿದೆ ಮತ್ತು ಅದು ಹೇಗಾದರೂ ತನ್ನ ವಿಚ್ಛೇದಿತ ಪತ್ನಿಯೊಂದಿಗೆ ಸೇಡು ತೀರಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ನ್ಯಾ.ಪಲ್ಲಿ ಬೆಟ್ಟುಮಾಡಿದರು.

ಅರ್ಜಿಯನ್ನು ತಿರಸ್ಕರಿಸಿದರಾದರೂ ನ್ಯಾ.ಪಲ್ಲಿ ಅವರು ಬಾಲಕಿಯ ತಂದೆಯಾಗಿ ತನ್ನ ಹೆಸರನ್ನು ತೋರಿಸಲು ಆಕೆಯ ಶಾಲೆಯನ್ನು ಸಂಪರ್ಕಿಸಲು ಅರ್ಜಿದಾರನಿಗೆ ಅನುಮತಿ ನೀಡಿದರು. ಅಪ್ರಾಪ್ತ ವಯಸ್ಕ ಬಾಲಕಿಯ ಜನನ ಪ್ರಮಾಣಪತ್ರವು ಇಬ್ಬರೂ ಹೆತ್ತವರ ಹೆಸರುಗಳನ್ನು ಒಳಗೊಂಡಿರಬೇಕು ಎಂದೂ ನ್ಯಾಯಾಲಯವು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News