ತಾಯ್ನಾಡಿಗೆ ವಾಪಸಾದ ಭಾರತದ ಒಲಿಂಪಿಕ್ಸ್ ತಂಡ: ಅದ್ದೂರಿ ಸ್ವಾಗತ

Update: 2021-08-09 13:29 GMT
ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾರನ್ನು ಸ್ವಾಗತಿಸಿದ ಸಂದರ್ಭ. 

ಹೊಸದಿಲ್ಲಿ: ಜಾವೆಲಿನ್ ಥ್ರೋನಲ್ಲಿ  ಚಿನ್ನದ ಪದಕ ಜಯಿಸಿ ಇತಿಹಾಸ ಸೃಷ್ಟಿಸಿರುವ  ನೀರಜ್ ಚೋಪ್ರಾ ಸಹಿತ ಭಾರತದ ಒಲಿಂಪಿಕ್ ತಂಡ ಸೋಮವಾರ ಸ್ವದೇಶಕ್ಕೆ ಮರಳಿತು. ಒಲಿಂಪಿಕ್ಸ್ ನಲ್ಲಿ ಒಟ್ಟು 7 ಪದಕಗಳನ್ನು ಜಯಿಸಿ ಸರ್ವಶ್ರೇಷ್ಠ ಸಾಧನೆ ಮಾಡಿರುವ ಕ್ರೀಡಾಪಟುಗಳನ್ನು ಸ್ವಾಗತಿಸಲು  ವಿಮಾನ ನಿಲ್ದಾಣದ ಹೊರಗೆ ಜನ ಸಂದಣಿ ಸೇರಿತ್ತು. ಕ್ರೀಡಾಪಟುಗಳನ್ನು ಭಾರತೀಯ ಕ್ರೀಡಾ ಪ್ರಾಧಿಕಾರದ ನಿಯೋಗವು ಅದರ ಪ್ರಧಾನ ನಿರ್ದೇಶಕ ಸಂದೀಪ್ ಪ್ರಧಾನ್ ನೇತೃತ್ವದಲ್ಲಿ ಸ್ವಾಗತಿಸಿತು. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಆದಿಲ್ಲೆ ಸುಮರಿವಾಲಾ ಕೂಡ ಅವರೊಂದಿಗೆ ಬಂದರು.

ಪದಕ ವಿಜೇತರಿಗೆ ತಮ್ಮ ಮೆಚ್ಚುಗೆಯನ್ನು ತೋರಿಸಲು ಜನರು ನೃತ್ಯ ಮಾಡಿದರು, ಹಾಡಿದರು. ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು ಈ ವೇಳೆ ಸುರಕ್ಷಿತ ಅಂತರದ ನಿಯಮವನ್ನು ಗಾಳಿಗೆ ತೂರಲಾಗಿತ್ತು. ಬಹಳಷ್ಟು ಜನರು ಮಾಸ್ಕ್ ಧರಿಸದೆ ಕ್ರೀಡಾತಾರೆಯರೊಂದಿಗೆ ಫೋಟೊ ಪಡೆಯಲು ಧಾವಿಸಿದರು.

ಕ್ರೀಡಾಭಿಮಾನಿಗಳು ಚೋಪ್ರಾ ಹಾಗೂ  ಇತರ ಪದಕ ವಿಜೇತರೊಂದಿಗೆ  ಸೆಲ್ಫಿ ತೆಗೆಯಲು ಮುಗಿಬಿದ್ದರು. ವಿಮಾನನಿಲ್ದಾಣಕ್ಕೆ ಆಗಮಿಸಿದ ಕ್ರೀಡಾಪಟುಗಳಿಗೆ ಹೂಗುಚ್ಛಗಳನ್ನು ನೀಡಿ ಸ್ವಾಗತಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News