​ಈಶ್ವರಪ್ಪ ಅವರೇ, ನೀವು ಬೆಳೆಯುವುದು ಎಂದು?

Update: 2021-08-10 08:30 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಂದು ರಾಜಕೀಯ ಪಕ್ಷ ಬೆಳೆಯುವುದನ್ನು ಎರಡು ರೀತಿಯಲ್ಲಿ ಗುರುತಿಸಬಹುದು. ಒಂದು, ರಾಜಕೀಯವಾಗಿ ಅಧಿಕಾರ ಹಿಡಿಯುವಲ್ಲಿ ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎನ್ನುವ ಆಧಾರದಿಂದ. ಅಧಿಕಾರ ಹಿಡಿಯುವ ಸಂದರ್ಭದಲ್ಲಿ, ಆ ಪಕ್ಷದ ಕಾರ್ಯಕರ್ತರ ಸಂಘಟಿತ ಶಕ್ತಿಯೂ ನಿರ್ಣಾಯಕವಾಗುತ್ತದೆ. ಇನ್ನೊಂದು, ಅದರೊಳಗಿರುವ ನಾಯಕರು ಎಷ್ಟರಮಟ್ಟಿಗೆ ಬೆಳೆದಿದ್ದಾರೆ ಎನ್ನುವ ಮೂಲಕ ಪಕ್ಷವನ್ನು ಅಳೆಯಬಹುದು. ಕೆಲವೊಮ್ಮೆ ಅಧಿಕಾರ ಹಿಡಿಯಲು ಯಶಸ್ವಿಯಾಗಿ, ಸರಕಾರ ನಡೆಸುವ ಸಂದರ್ಭದಲ್ಲಿ ಮುತ್ಸದ್ದಿ ನಾಯಕರಿಲ್ಲದೆ ಆ ಪಕ್ಷ ವಿಫಲವಾಗಬಹುದು. ಒಂದು ರಾಜಕೀಯ ಪಕ್ಷ ಕಾರ್ಯಕರ್ತರಿಂದ ಕಟ್ಟಲ್ಪಡುತ್ತದೆಯಾದರೂ, ಆ ಪಕ್ಷದ ತುತ್ತ ತುದಿಯಲ್ಲಿರುವ ನಾಯಕರು ಪ್ರಬುದ್ಧರಲ್ಲದೇ ಹೋದರೆ, ಕಾರ್ಯಕರ್ತರ ಶ್ರಮ ವ್ಯರ್ಥವಾಗಬಹುದು. ‘ಬಿಜೆಪಿ ಈಗ ಒಂದಕ್ಕೆ ಎರಡು ಜೀವವನ್ನು ತೆಗೆಯುವಷ್ಟು ಬೆಳೆದಿದೆ’ ಎಂದು ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಚಿವರಾಗಿರುವ ಕೆ. ಎಸ್. ಈಶ್ವರಪ್ಪ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಬಿಜೆಪಿಯ ಬೆಳವಣಿಗೆಯನ್ನು ತನ್ನದೇ ರೀತಿಯಲ್ಲಿ ಈಶ್ವರಪ್ಪ ವ್ಯಂಗ್ಯವಾಡಿದಂತಾಗಿದೆ.

ಸಾಧಾರಣವಾಗಿ ಒಂದು ಪಕ್ಷ ಬೆಳೆದಿದೆ ಎನ್ನುವುದನ್ನು ಮಾನದಂಡವಾಗಿಸಲು ಅಲ್ಲಿರುವ ಮುತ್ಸದ್ದಿ ನಾಯಕರ ಕಡೆಗೆ ಬೆರಳು ತೋರಿಸಲಾಗುತ್ತದೆ ಅಥವಾ ತಮ್ಮ ಆಡಳಿತವಿರುವ ರಾಜ್ಯಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಡಲಾಗುತ್ತದೆ. ಆದರೆ, ಈಶ್ವರಪ್ಪ ಅವರು, ತಮ್ಮ ಪಕ್ಷ ಎಷ್ಟರಮಟ್ಟಿಗೆ ಬೆಳೆದಿದೆ ಎನ್ನುವುದನ್ನು, ‘ತಮ್ಮ ಪಕ್ಷದಲ್ಲಿರುವ ಕ್ರಿಮಿನಲ್ ಕಾರ್ಯಕರ್ತ’ರ ಮಾನದಂಡವನ್ನು ಇಟ್ಟುಕೊಂಡು ವಿವರಿಸಿದ್ದಾರೆ. ‘ಇಂದು ನಮ್ಮವರಲ್ಲಿ ಒಬ್ಬನನ್ನು ಕೊಂದರೆ ನಾವು ಇಬ್ಬರನ್ನು ತೆಗೆದು ಬಿಡುವಷ್ಟು ಬೆಳೆದಿದ್ದೇವೆ’ ಎಂದು ಈಶ್ವರಪ್ಪ ಹೇಳುವ ಮೂಲಕ, ನೇರವಾಗಿ ತನ್ನ ಪಕ್ಷಕ್ಕೆ ಕ್ರಿಮಿನಲ್ ಕಳಂಕವನ್ನು ಅಂಟಿಸಿದ್ದಾರೆ. ಇದು ಒಂದು ಪಕ್ಷದ ಬೆಳವಣಿಗೆಯನ್ನು ಹೇಳುತ್ತದೆಯೇ ಅಥವಾ ಅದರ ಅಧಃಪತನವನ್ನು ಹೇಳುತ್ತದೆಯೇ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಿಲ್ಲ.

ಒಂದು ಕಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಜಸ್ವಂತ್ ಸಿಂಗ್‌ರಂತಹ ಹಿರಿಯ ಮುತ್ಸದ್ದಿ ನಾಯಕರ ಮೂಲಕ ತನ್ನದೇ ವರ್ಚಸ್ಸನ್ನು ಬಿಜೆಪಿ ಹೊಂದಿತ್ತು. ಇಂದು ಬಿಜೆಪಿ, ತನ್ನೊಳಗಿನ ಕ್ರಿಮಿನಲ್‌ಗಳನ್ನು ತೋರಿಸಿ, ತನ್ನ ಸಾಮರ್ಥ್ಯವನ್ನು ಕೊಚ್ಚಿಕೊಳ್ಳಬೇಕಾದ ದೈನೇಸಿ ಸ್ಥಿತಿಗೆ ಇಳಿದಿದೆ. ಇಂತಹದೊಂದು ಹೇಳಿಕೆಯನ್ನು ನೀಡುವ ಮೂಲಕ ಈಶ್ವರಪ್ಪ ತಮ್ಮ ಕಾರ್ಯಕರ್ತರನ್ನು ಅವಮಾನಿಸಿದ್ದಾರೆ. ಜೊತೆಗೆ, ಬಿಜೆಪಿ ಸರಕಾರ ಬೆಳೆದಿರುವುದೇ ಕ್ರಿಮಿನಲ್‌ಗಳ ಬೆಂಬಲದಲ್ಲಿ ಎನ್ನುವುದನ್ನು ಘೋಷಿಸಿಕೊಂಡಂತಾಗಿದೆ. ಈಶ್ವರಪ್ಪ ಅವರಿಗೆ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಖಾತೆಯನ್ನು ನೀಡಲಾಗಿದೆ. ಅಭಿವೃದ್ಧಿಯನ್ನು ಅಧಿಕಾರ ವೀಕೇಂದ್ರೀಕರಣದ ಮೂಲಕ ತಳಸ್ತರದ ವರೆಗೆ ವಿಸ್ತರಿಸುವುದು ಈ ಖಾತೆಯನ್ನು ವಹಿಸಿರುವ ಸಚಿವರ ಹೊಣೆಗಾರಿಕೆ. ಆದರೆ, ಈಶ್ವರಪ್ಪ ಹೇಳಿಕೆಗೂ ಅವರ ಖಾತೆಗೂ ಯಾವ ಸಂಬಂಧವೂ ಇಲ್ಲ. ಬಹುಶಃ ಮುಂದಿನ ದಿನಗಳಲ್ಲಿ ಅಪರಾಧ, ಕ್ರಿಮಿನಲ್ ಚಟುವಟಿಕೆಗಳನ್ನೇ ಅವರು ವಿಕೇಂದ್ರೀಕರಣಗೊಳಿಸಲಿದ್ದಾರೆಯೇ? ಎನ್ನುವ ಆತಂಕ ಜನರನ್ನು ಕಾಡುತ್ತಿದೆ.

ಬಿಜೆಪಿ ಬೆಳೆದಿದೆಯೋ, ಇಲ್ಲವೋ ಆದರೆ ಈಶ್ವರಪ್ಪ ಮಾತ್ರ ಇನ್ನೂ, ಬೀದಿಯ ಪುಡಿ ರೌಡಿ ಮಾದರಿಯ ನಾಯಕರಾಗಿಯೇ ಉಳಿದಿದ್ದಾರೆ ಎನ್ನುವುದು ಅವರ ಮಾತಿನಿಂದ ಬಹಿರಂಗವಾಗಿದೆ. ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದವರಲ್ಲಿ ಮುಂಚೂಣಿಯಲ್ಲಿರುವವರು ಯಡಿಯೂರಪ್ಪ. ಹಿಂದುತ್ವದ ತಳಹದಿಯಲ್ಲೇ ಬಿಜೆಪಿಯನ್ನು ಅವರು ಕಟ್ಟಿದರಾದರೂ, ವೈಯಕ್ತಿಕವಾಗಿ ಹೊಡಿ, ಬಡಿ, ಕೊಲ್ಲು ಎನ್ನುವ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಿ ಎಂದೂ ತಮ್ಮ ಕೈಗಳಿಗೆ ನೆತ್ತರನ್ನು ಅಂಟಿಸಿಕೊಳ್ಳಲಿಲ್ಲ. ಆರೆಸ್ಸೆಸ್‌ನಂತಹ ಸಂಘಟನೆಗಳಿಂದ ಬೆಳೆದು ಬಂದ ಸುರೇಶ್ ಕುಮಾರ್, ದಿ. ಅನಂತಕುಮಾರ್, ದಿವಂಗತ ವಿ. ಎಸ್. ಆಚಾರ್ಯ ಇವರೆಲ್ಲ ಹಿಂದುತ್ವದ ಪ್ರಬಲ ಪ್ರತಿಪಾದಕರಾದರೂ, ಜೀವನದುದ್ದಕ್ಕೂ ‘ಸಜ್ಜನ ರಾಜಕಾರಣಿ’ ಎನ್ನುವ ಮೊಹರಿನ ಜೊತೆಗೇ ರಾಜಕೀಯ ನಡೆಸಿದರು. ಆದರೆ ಈಶ್ವರಪ್ಪ ಅವರು ಮಾತ್ರ, ನಾಲಗೆ ಕತ್ತರಿಸುವ, ಒಂದಕ್ಕೆ ಎರಡು ಜೀವ ಬಲಿ ತೆಗೆದುಕೊಳ್ಳುವ ತನ್ನ ಹೇಳಿಕೆಗಳ ಮೂಲಕ ರಾಜಕೀಯವಾಗಿ ದಿನದಿಂದ ದಿನಕ್ಕೆ ಕುಬ್ಜರಾಗುತ್ತಾ ಬರುತ್ತಿದ್ದಾರೆ. ಯಡಿಯೂರಪ್ಪ ರಾಜಕೀಯವಾಗಿ ನಿವೃತ್ತರಾಗುತ್ತಿರುವ ಈ ಹಂತದಲ್ಲೂ ಈಶ್ವರಪ್ಪ ಬೀದಿ ರೌಡಿ ಮಟ್ಟದ ರಾಜಕಾರಣದಿಂದ ಮೇಲೆ ಬರಲು ಸಾಧ್ಯವಾಗದೇ ಇರುವುದು ಅವರ ರಾಜಕೀಯ ಜೀವನದ ಬಹುದೊಡ್ಡ ಸೋಲು.

ಇಂತಹ ಮಾತುಗಳನ್ನು ಸಾರ್ವಜನಿಕವಾಗಿ ಆಡದೇ ಇದ್ದರೆ, ಬಿಜೆಪಿಯಲ್ಲಿ ತನಗೆ ಅಸ್ತಿತ್ವವೇ ಇಲ್ಲ ಎನ್ನುವುದು ಈಶ್ವರಪ್ಪ ಅವರಿಗೆ ಹೆಚ್ಚು ಮನವರಿಕೆಯಾದಂತಿದೆ. 70 ವರ್ಷ ದಾಟಿದ ಹಿರಿಯ ನಾಯಕರನ್ನೆಲ್ಲ ಹಂತ ಹಂತವಾಗಿ ರಾಜಕೀಯದಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿರುವಾಗ, ತನ್ನ ಅಗತ್ಯವನ್ನು ‘ಕೋಮು ದ್ವೇಷ’ದ ಹೇಳಿಕೆಗಳನ್ನು ನೀಡುವ ಮೂಲಕ ಆರೆಸ್ಸೆಸ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿದ್ದಾರೆ. ಇದು ಅವರ ರಾಜಕೀಯ ಹತಾಶೆಯನ್ನು ತೆರೆದಿಟ್ಟಿದೆ. ಒಬ್ಬನನ್ನು ಕೊಂದರೆ ಇಬ್ಬರನ್ನು ಕೊಂದು ಹಾಕಿ ಎಂದು ಕಾರ್ಯಕರ್ತರಿಗೆ ಕರೆ ನೀಡುವ ಮೂಲಕ ಈಶ್ವರಪ್ಪ ಅವರು ತಮ್ಮದೇ ಕಾರ್ಯಕರ್ತರನ್ನು ಕ್ರಿಮಿನಲ್‌ಗಳನ್ನಾಗಿಸುವ ಪ್ರಯತ್ನದಲ್ಲಿದ್ದಾರೆ. ನಾಯಕರ ಮೇಲೆ ನಂಬಿಕೆಯಿಟ್ಟು ಬಂದ ಕಾರ್ಯಕರ್ತರನ್ನು ಈ ಮೂಲಕ ಜೈಲಿಗೆ ಕಳುಹಿಸಿ ಅವರ ಬದುಕನ್ನು ಮೂರಾಬಟ್ಟೆ ಮಾಡಲು ಹೊರಟಿದ್ದಾರೆ.

ಪಂಚಾಯತ್ ರಾಜ್ ಸಚಿವರಾಗಿ, ತಮ್ಮ ಕಾರ್ಯಕರ್ತರಿಗೆ ಬದುಕುವ ದಾರಿಯನ್ನು ಹೇಳಿಕೊಡುವುದು ಬಿಟ್ಟು, ಸರ್ವನಾಶದ ಹಾದಿಯನ್ನು ತೋರಿಸಿಕೊಡುವ ಈಶ್ವರಪ್ಪ ತಾನು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಖಾತೆಗೆ ಅನರ್ಹ ಎನ್ನುವುದನ್ನು ರಾಜ್ಯದ ಮುಂದೆ ಘೋಷಿಸಿಕೊಂಡಿದ್ದಾರೆ. ಯಾವುದೇ ರಾಜಕೀಯ ದಾಳಿ ನಡೆಸಿದರೆ ಅವರನ್ನು ಕಾನೂನಿನ ಮೂಲಕ ಬಗ್ಗು ಬಡಿಯಲಾಗುತ್ತದೆ ಎಂದು ಎಚ್ಚರಿಸಬೇಕಾದ ಸಚಿವರೇ ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು, ‘ಒಂದಕ್ಕೆ ಎರಡು ಜನರ ಜೀವವನ್ನು ತೆಗೆಯಿರಿ’ ಎಂದು ಕಾರ್ಯಕರ್ತರಿಗೆ ಕರೆ ನೀಡುತ್ತಾರೆ ಎಂದ ಮೇಲೆ ಹೊಸ ಸರಕಾರದಿಂದ ಜನಪರವಾದ ಆಡಳಿತವನ್ನು ನಿರೀಕ್ಷಿಸುವುದಾದರೂ ಹೇಗೆ? ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ಮೂಲಕ ರಾಜ್ಯದಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣಗಳನ್ನು ನಡೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಬೇಕಾದ ಸಚಿವರ ಅಗತ್ಯ ಸದ್ಯಕ್ಕೆ ನಾಡಿಗಿದೆ.

ಈಗಾಗಲೇ ಕೊರೋನ, ಲಾಕ್‌ಡೌನ್‌ನಿಂದ ತತ್ತರಿಸಿರುವ ಕರ್ನಾಟಕ ನೆಮ್ಮದಿಯ ಬದುಕಿಗೆ ಹಂಬಲಿಸುತ್ತಿದೆ. ಕಳೆದುಕೊಂಡ ತಮ್ಮ ಆಪ್ತ ಜೀವಗಳಿಗಾಗಿ ಕಣ್ಣೀರು ಸುರಿಸುತ್ತಿರುವ ಜನರಿಗೆ ಭವಿಷ್ಯದ ಕುರಿತಂತೆ ಭರವಸೆ ತುಂಬುವ ಸಚಿವರು ತುರ್ತಾಗಿ ಬೇಕಾಗಿದ್ದಾರೆ. ಈ ಕಾರಣದಿಂದ, ಈಶ್ವರಪ್ಪರಿಗಾಗಿ ಯಾವುದಾದರೂ ಹೊಸ ‘ಕಸಾಯಿ ಖಾನೆ’ಯ ಖಾತೆಯೊಂದನ್ನು ರಚಿಸಿ ಅದರ ಉಸ್ತುವಾರಿಯನ್ನು ಅವರಿಗೆ ಕೊಟ್ಟು ಅವರ ರಕ್ತದಾಹವನ್ನು ತಣಿಸಬೇಕು. ಅವರ ಕೈಯಿಂದ ಪಂಚಾಯತ್ ರಾಜ್ ಖಾತೆಯನ್ನು ಇನ್ನೊಬ್ಬ ಬೌದ್ಧಿಕವಾಗಿ ಬೆಳೆದ, ಮುತ್ಸದ್ದಿ ನಾಯಕರಿಗೆ ವಹಿಸಬೇಕಾಗಿದೆ. ಈ ಮೂಲಕ ಬಿಜೆಪಿ ತಾನು ಬೆಳೆದಿರುವುದನ್ನು ರಾಜ್ಯದ ಜನತೆಗೆ ಸಾಬೀತು ಮಾಡಬೇಕು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News