ವಿದ್ಯುತ್ ತಿದ್ದುಪಡಿ ಮಸೂದೆಗೆ ವಿರೋಧ: ತುಮಕೂರಿನಲ್ಲಿ ವಿದ್ಯುತ್ ಮೀಟರ್‌ಗಳನ್ನು ಸುಟ್ಟು ರೈತರ ಪ್ರತಿಭಟನೆ

Update: 2021-08-10 10:21 GMT

ತುಮಕೂರು, ಆ.10: ಲೋಕಸಭೆಯಲ್ಲಿ ಕೇಂದ್ರ ಸರಕಾರ ಮಂಡಿಸಲು ಮುಂದಾಗಿರುವ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ, ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ವಿದ್ಯುತ್ ಮೀಟರ್‌ಗಳನ್ನು ಸುಟ್ಟು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್ ನೇತೃತ್ವದಲ್ಲಿ ನಗರದ ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ವಿದ್ಯುತ್ ಮೀಟರ್‌ಗಳನ್ನು ಪ್ರದರ್ಶಿಸುತ್ತಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಕಚೇರಿ ಮುಂಭಾಗದಲ್ಲಿ ಅವುಗಳನ್ನು ಒಡೆದು, ಬೆಂಕಿ ಹಚ್ಚುವ ಮೂಲಕ ಕೇಂದ್ರ ಸರಕಾರದ ಖಾಸಗೀಕರಣ ನೀತಿಯ ವಿರುದ್ದ ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡ ಪ್ರತಿಭಟನಾನಿರತ ರೈತ ಸಂಘದ ಹಾಗೂ ಹಸಿರು ಸೇನೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಆನಂದ ಪಟೇಲ್,ಕೇಂದ್ರ ಸರಕಾರ ಇತ್ತೀಚಗೆ ಜಾರಿಗೆ ತಂದಿರುವ ಹಲವಾರು ರೈತ ವಿರೋಧಿ,ಜನವಿರೋಧಿ,ಕಾರ್ಮಿಕ ವಿರೋಧಿ ಕಾನೂನುಗಳು ಈ ದೇಶದ ದುಡಿವ ಜನರನ್ನು ಕಾರ್ಪೊರೇಟ್ ಕಂಪೆನಿಗಳ ಗುಲಾಮರನ್ನಾಗಿಸುವ ಹುನ್ನಾರ ಅಡಗಿದೆ. ಹಾಗಾಗಿ ಇಡೀ ದೇಶಾದ್ಯಂತ ರೈತರು ವಿದ್ಯುತ್ ಖಾಸಗೀಕರಣ ಬಿಲ್ ವಿರುದ್ದ ಪ್ರತಿಭಟನೆಗೆ ಇಳಿದಿದ್ದಾರೆ. ಒಂದು ವೇಳೆ ಸರಕಾರ ರೈತರ ಪ್ರತಿಭಟನೆಯನ್ನು ಲೆಕ್ಕಿಸದೆ ಬಿಲ್ ಮಂಡಿಸಿ, ಜಾರಿಗೆ ತಂದರೆ,ಇಂದು ವಿದ್ಯುತ್ ಮೀಟರ್‌ಗಳನ್ನು ಸುಟ್ಟ ರೀತಿಯೇ ಸರಕಾರ ರೈತರ ಪಂಪ್‌ಸೆಟ್‌ಗಳಿಗೆ ಅಳವಡಿಸುವ ಮೀಟರ್‌ಗಳನ್ನು ಸುಟ್ಟ ಹಾಕಲಾಗುವುದು ಎಂದು ಎಚ್ಚರಿಸಿದರು.

ಈ ದೇಶದ ಶೇ70ರಷ್ಟು ಜನರು ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಹವಾಮಾನ ವೈಪರೀತ್ಯ, ಬರ, ನೆರೆ, ರಸಗೊಬ್ಬರ, ಬಿತ್ತನೆ ಬೀಜಗಳ ಬೆಲೆ ಹೆಚ್ಚಳ ಎಲ್ಲವನ್ನು ಸಹಿಸಿಕೊಂಡು ಉತ್ತು, ಬಿತ್ತಿ, ಬೆಳೆದು ದೇಶದ ಜನರಿಗೆ ಅನ್ನ ನೀಡುತ್ತಿದ್ದಾರೆ. ಇಂತಹ ಸ್ವಾವಲಂಬಿ ಕ್ಷೇತ್ರವನ್ನು ಖಾಸಗಿ ಕಂಪೆನಿಗಳ ಕಪಿಮುಷ್ಟಿಗೆ ನೀಡಲು ಹೊರಟಿರುವುದು ಸರಿಯಲ್ಲ. ಅಗತ್ಯಬಿದ್ದರೆ ನಮ್ಮ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ವಿಧಾನಸೌಧ ಮತ್ತು ಪಾರ್ಲಿಮೆಂಟ್ ಮುತ್ತಿಗೆಗೂ ರೈತರು ಹಿಂಜರಿಯುವುದಿಲ್ಲ. ಸರಕಾರ ಕೂಡಲೇ ರೈತರ ವಿರೋಧಿ ಕಾಯ್ದೆಗಳನ್ನು ಕೈಬಿಟ್ಟು, ಜನರಪರ ಕಾರ್ಯಕ್ರಮಗಳತ್ತ ಮುಂದಾಗಬೇಕೆಂದರು.

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಧನಂಜಯ್ಯ ಆರಾಧ್ಯ ಮಾತನಾಡಿ, ಕೇಂದ್ರ ಸರಕಾರದ ರೈತ ವಿರೋಧಿ ನೀತಿಗಳಿಂದಾಗಿ ರೈತರ ಆದಾಯದಲ್ಲಿ ಗಣನೀಯ ಕುಸಿತ ಕಂಡಿದೆ.ಕೃಷಿ ರಾಜ್ಯ ವಲಯದಲ್ಲಿದ್ದರೂ, ಕೇಂದ್ರ ಸರಕಾರ ಬಲ ಪ್ರಯೋಗದ ಮೂಲಕ ಕಾಯ್ದೆಗಳನ್ನು ಬಲವಂತವಾಗಿ ಹೇರುವ ಕೆಲಸ ಮಾಡುತ್ತಿದೆ. ಇಂತಹ ನೀತಿಗಳು ಒಕ್ಕೂಟ ವ್ಯವಸ್ಥೆಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಕೂಡಲೇ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಪ್ರಸ್ತಾವವನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಕೊರಟಗೆರೆ ತಾಲೂಕು ಅಧ್ಯಕ್ಷ ಕೋಡ್ಲಹಳ್ಳಿ ಸಿದ್ದರಾಜು, ಕುಣಿಗಲ್ ತಾಲೂಕು ಅಧ್ಯಕ್ಷ ಅನಿಲ್‌ಕುಮಾರ್,ತಿಪಟೂರು ತಾಲೂಕು ಅಧ್ಯಕ್ಷ ಪುಟ್ಟರಾಜು, ಶಿರಾ ತಾಲೂಕು ಅಧ್ಯಕ್ಷ ಸಣ್ಣ ದ್ಯಾಮೇಗೌಡ, ಗಂಗರಾಜು, ಕೀರ್ತಿ, ಬಸ್ತಿಹಳ್ಳಿ ರಾಜಣ್ಣ, ರುದ್ರೇಶ ಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News