ದೇಶಾದ್ಯಂತ ಎನ್ ಆರ್ ಸಿ ನಡೆಸಲು ಸರಕಾರ ಇನ್ನೂ ನಿರ್ಧರಿಸಿಲ್ಲ: ಕೇಂದ್ರ ಸಚಿವ ನಿತ್ಯಾನಂದ ರಾಯ್

Update: 2021-08-10 15:37 GMT

ಹೊಸದಿಲ್ಲಿ: ಇಡೀ ದೇಶದಲ್ಲಿ ರಾಷ್ಟ್ರೀಯ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ ಆರ್ ಐಸಿ) ಸಿದ್ಧಪಡಿಸುವ ಕುರಿತು ಸರಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸಚಿವ ನಿತ್ಯಾನಂದ ರಾಯ್ ಮಂಗಳವಾರ ಸಂಸತ್ತಿನಲ್ಲಿ ಹೇಳಿದರು.

ಆದಾಗ್ಯೂ 2021 ರ ಜನಗಣತಿಯ ಮೊದಲ ಹಂತದ ಜೊತೆಗೆ ಪೌರತ್ವ ಕಾಯ್ದೆ 1955 ರ ಅಡಿಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್ ಪಿಆರ್) ನವೀಕರಿಸಲು ಸರಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.

“ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ನಾಗರಿಕರ ನೋಂದಣಿಯನ್ನು (ಎನ್ ಆರ್ ಸಿ) ತಯಾರಿಸಲು ಸರಕಾರ ಇಲ್ಲಿಯ ತನಕ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ" ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ರಾಯ್ ಹೇಳಿದರು.

ಇಲ್ಲಿಯವರೆಗೆ  ಅಸ್ಸಾಂನಲ್ಲಿ ಮಾತ್ರ ಎನ್‌ಆರ್‌ಸಿಯನ್ನು ನವೀಕರಿಸಲಾಗಿದೆ.

2019 ರಲ್ಲಿ ಎನ್ ಆರ್ ಸಿ ಯ ಅಂತಿಮ ಪಟ್ಟಿಯನ್ನು ಪ್ರಕಟಿಸಿದಾಗ 3.3 ಕೋಟಿ ಅರ್ಜಿದಾರರಲ್ಲಿ ಒಟ್ಟು 19.06 ಲಕ್ಷ ಜನರನ್ನು ಹೊರಗಿಡಲಾಗಿತ್ತು. ಇದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಸ್ಸಾಂನಲ್ಲಿ ಎನ್‌ಆರ್‌ಸಿಯನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಹಕ್ಕು ಹಾಗೂ ಆಕ್ಷೇಪಣೆಗಳ ನಿರ್ಧಾರಗಳ ಫಲಿತಾಂಶದಿಂದ ತೃಪ್ತರಾಗದ ಯಾವುದೇ ವ್ಯಕ್ತಿಯು ಈ ಆದೇಶದ 120 ದಿನಗಳಲ್ಲಿ ಗೊತ್ತುಪಡಿಸಿದ ವಿದೇಶಿ ನ್ಯಾಯಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News