ಪ್ರಥಮ ಪಿಯುಸಿ ಪ್ರವೇಶಾತಿಗೆ ದಂಡ ಶುಲ್ಕವಿಲ್ಲದೆ ಆ.31ರವರೆಗೆ ಅವಕಾಶ
ಬೆಂಗಳೂರು, ಆ.10: 2021-22ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯು ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿಗೆ ಇಂದಿನಿಂದಲೇ(ಆ.10) ಅನುಮತಿ ನೀಡಲಾಗಿದ್ದು, ದಂಡ ಶುಲ್ಕವಿಲ್ಲದ ಆ.31ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆ, ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡ ಮರುದಿನದಿಂದಲೇ ಪ್ರವೇಶಾತಿ ಪ್ರಾರಂಭಿಸಲು ಇಲಾಖೆಯ ಮಾರ್ಗಸೂಚಿಯಲ್ಲಿ ಸೂಚಿಸಲಾಗಿತ್ತು. ಅದರಂತೆ ಆ.9ರಂದು ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಇಂದಿನಿಂದ(ಆ.10) ರಾಜ್ಯದ ಎಲ್ಲ ಕಾಲೇಜುಗಳಲ್ಲೂ ಪ್ರಥಮ ಪಿಯುಸಿ ಪ್ರವೇಶಾತಿ ನಡೆಯುತ್ತಿದೆ.
ದಂಡಶುಲ್ಕವಿಲ್ಲದೆ ಪ್ರಥಮ ಪಿಯು ಪ್ರವೇಶಾತಿಗೆ ಆ.31 ಕೊನೆಯ ದಿನವಾಗಿರುತ್ತದೆ. ವಿಳಂಬ ದಾಖಲಾತಿ 670ರೂ. ದಂಡ ಶುಲ್ಕದೊಂದಿಗೆ ಸೆ.1ರಿಂದ 11 ಅಂತಿಮ ದಿನವಾಗಿರುತ್ತದೆ. ಹಾಗೂ 2,890 ರೂ. ವಿಶೇಷ ದಂಡ ಶುಲ್ಕದೊಂದಿಗೆ ಸೆ.13ರಿಂದ 25 ಕೊನೆಯ ದಿನವಾಗಿರುತ್ತದೆ.
2021-22ರ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ದಾಖಲಾತಿ ಶುಲ್ಕಗಳನ್ನು ಸಂಗ್ರಹಿಸುವುದು. ಈ ರೀತಿ ಸಂಗ್ರಹಿಸಿದ ಶುಲ್ಕವನ್ನು ಇಲಾಖೆಗೆ ದಾಖಲಾತಿ ದಿನಾಂಕ ಮುಗಿದ ಮಾರನೇ ಕಾರ್ಯನಿರತ ದಿನಾಂಕದಂದು ಖಜಾನೆಗೆ ಶುಲ್ಕಗಳನ್ನು ಕಡ್ಡಾಯವಾಗಿ ಜಮೆ ಮಾಡಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪ್ರಥಮ ಪಿಯುಸಿ ಅನ್‍ಲೈನ್ ತರಗತಿಗಳನ್ನು ಆ.16ರಿಂದ ಪ್ರಾರಂಭಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಲಾಗಿದೆ.