×
Ad

ಬೆಂಗಳೂರು: ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

Update: 2021-08-10 20:10 IST

ಬೆಂಗಳೂರು, ಆ.10: ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಮಂಗಳವಾರ ಇಲ್ಲಿನ ಕೆಜಿ ರಸ್ತೆಯ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಹೋರಾಟಗಾರರು, ಕೇಂದ್ರ ಸರಕಾರ ಈ ಕೂಡಲೇ ವಿದ್ಯುತ್ ಖಾಸಗೀಕರಣ ಸಂಬಂಧಿಸಿದ ಮಸೂದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ, ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಕ್ರಮವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯನ್ನು ಖಾಸಗೀಕರಣ ಮಾಡುವುದರಿಂದ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಸಮಸ್ಯೆಯಾಗಲಿದೆ ಎಂದ ಅವರು, ಕೇಂದ್ರ ಸರಕಾರ ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣ ಮಾಡುತ್ತಿದೆ. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವುದರಿಂದ ರೈತರ ಪಂಪ್ ಸೆಟ್‍ಗಳಿಗೆ ನೀಡುತ್ತಿದ್ದ ಸಬ್ಸಿಡಿ ಬಂದ್ ಆಗುತ್ತದೆ ಎಂದು ದೂರಿದರು.

ಅದು ಅಲ್ಲದೆ ಖಾಸಗಿಯವರು ಮನಬಂದಂತೆ ವಿದ್ಯುತ್ ಬೆಲೆ ಏರಿಕೆ ಮಾಡುತ್ತಾರೆ. ರೈತರ ಪಂಪ್‍ಸೆಟ್‍ಗಳಿಗೆ ಮೀಟರ್‍ಗಳನ್ನು ಅಳವಡಿಕೆ ಮಾಡುತ್ತಾರೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗಲಿದೆ. ಕೃಷಿ ವಲಯದಲ್ಲಿ ವಿದ್ಯುತ್ ಖಾಸಗೀಕರಣ ಮಾಡಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News