ಸಂಚಾರ ಪೊಲೀಸರಿಂದ ಪಿಡಿಎ ಯಂತ್ರ ವಾಪಸ್ಸು ಪಡೆದಿಲ್ಲ: ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಸ್ಪಷ್ಟನೆ
Update: 2021-08-10 20:46 IST
ಬೆಂಗಳೂರು, ಆ.10: ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳನ್ನು ಅಡ್ಡಗಟ್ಟಿ ದಂಡ ಸಂಗ್ರಹಿಸುವ ಪಿಡಿಎ ಯಂತ್ರಗಳನ್ನು ವಾಪಾಸ್ ಪಡೆದುಕೊಂಡಿಲ್ಲ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೋಷವಿರುವ ದಂಡ ಸಂಗ್ರಹಿಸುವ ಪಿಡಿಎ ಯಂತ್ರಗಳನ್ನು ವಾಪಾಸ್ ಪಡೆದುಕೊಂಡು ತಪಾಸಣೆ ನಡೆಸಲಾಗುತ್ತಿದ್ದು, ಸಂಚಾರ ನಿಯಮ ಉಲ್ಲಂಘನೆಯ ವಾಹನಗಳನ್ನು ಚಾಲಕರು ಸವಾರರಿಂದ ದಂಡ ಪಾವತಿಸಿಕೊಳ್ಳುವುದನ್ನು ಸ್ಥಗಿತಗೊಳಿಸಿಲ್ಲ ಎಂದು ವಿವರಿಸಿದರು.
ಇನ್ನು, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರಿಗೆ ಪೊಲೀಸರು ಪಿಡಿಎ ಯಂತ್ರಗಳನ್ನು ಬಳಸಿ ದಂಡ ಸಂಗ್ರಹಿಸುವ ಕಾರ್ಯ ಮುಂದುವರೆದಿದೆ ಎಂದ ಅವರು, ಸಂಚಾರ ನಿಯಮ ಉಲ್ಲಂಘನೆಯ ವಾಹನಗಳನ್ನು ಚಾಲಕರು ಸವಾರರಿಂದ ದಂಡ ಪಾವತಿಸಿಕೊಳ್ಳುವುದನ್ನು ಸ್ಥಗಿತಗೊಳಿಸಲಾಗಿದೆ ಎನ್ನುವ ವರದಿಗಳು ಸತ್ಯಕ್ಕೆ ದೂರವಾಗಿದೆ ಎಂದು ನುಡಿದರು.