ರಾಜ್ಯದಿಂದ ವಾರಕ್ಕೆ 35 ಲಕ್ಷ ಕೋವಿಡ್ ಲಸಿಕೆಗೆ ಬೇಡಿಕೆ: ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶನ

Update: 2021-08-10 17:18 GMT

ಬೆಂಗಳೂರು, ಆ.10: ಕೊರೋನ ಸೋಂಕು ನಿಯಂತ್ರಿಸುವ ಸಂಬಂಧ ಪ್ರತಿ ವಾರ 35 ಲಕ್ಷ ಡೋಸ್ ಕೋವಿಡ್ ಲಸಿಕೆ ಪೂರೈಸುವಂತೆ ಕೋರಿ ರಾಜ್ಯ ಸರಕಾರ ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರಕ್ಕೆ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ. ರಾಜ್ಯ ಸರಕಾರವು ಆ.4ರಂದು ಈ ಕುರಿತು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ.

ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಮನವಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು.

ಸರಕಾರದ ಪರ ವಾದಿಸಿದ ವಕೀಲರು, ರಾಜ್ಯದಲ್ಲಿ 34.48 ಲಕ್ಷ ಫಲಾನುಭವಿಗಳು ಎರಡನೇ ಡೋಸ್ ಪಡೆಯುವುದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾಲಮಿತಿಯನ್ನು ಮೀರಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ರಾಜ್ಯ ಸರಕಾರಕ್ಕೆ ಪ್ರತಿ ವಾರ 35 ಲಕ್ಷ ಡೋಸ್‌ಗಳನ್ನು ಕೇಂದ್ರ ಸರಕಾರವು ಪೂರೈಸಿದರೆ ಎಲ್ಲರಿಗೂ ಮೂರು ತಿಂಗಳ ಒಳಗಾಗಿ ಎರಡೂ ಡೋಸ್ ಲಸಿಕೆ ನೀಡಬಹುದಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೋವಿಶೀಲ್ಡ್ ಮೊದಲ ಡೋಸ್ ಪಡೆದ 27.22 ಲಕ್ಷ ಫಲಾನುಭವಿಗಳು 12 ವಾರಗಳನ್ನು ಪೂರೈಸಿದ್ದಾರೆ. ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದ 7.26 ಲಕ್ಷ ಫಲಾನುಭವಿಗಳು ನಾಲ್ಕು ವಾರಗಳನ್ನು ಪೂರೈಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳು ನಿರ್ದಿಷ್ಟ ಸಮಯದವರೆಗೆ ಪರಿಣಾಮಕಾರಿ ಎಂದಾದರೆ ಉಳಿದ ಡೋಸ್‌ಗಳನ್ನು ನೀಡುವ ಸಂಬಂಧದ ಕಾರ್ಯಯೋಜನೆಗೆ ಅಗತ್ಯ ಬದಲಾವಣೆ ಮಾಡಬೇಕಿದೆ ಎಂದು ಪೀಠವು ಹೇಳಿದೆ. ರಾಜ್ಯದ ಎಲ್ಲ್ಲ ಬೋಧಕ ಮತ್ತು ಬೋಧಕೇತರರಿಗೆ ಶೇ.84.1ರಷ್ಟು ಲಸಿಕೆ ನೀಡಲಾಗಿದೆ ಎಂದು ಸರಕಾರವು ನ್ಯಾಯಾಲಯಕ್ಕೆ ಇದೇ ವೇಳೆ ಮಾಹಿತಿ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News