×
Ad

ಇಲ್ಲಿಂದಲೇ ನನ್ನ ರಾಜಕೀಯ ಅಂತ್ಯ ಅಥವಾ ಪುನರಾರಂಭ ಆಗಬಹುದು: ಸಚಿವ ಆನಂದ್ ಸಿಂಗ್

Update: 2021-08-11 16:53 IST

ವಿಜಯನಗರ(ಹೊಸಪೇಟೆ), ಆ. 11: `ನಾನು ಯಾವುದೇ ಸಂಕಲ್ಪ ಮಾಡುವುದಾದರೆ ಇಲ್ಲಿನ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಪೂಜೆ ಮಾಡಿ ನಂತರ ಕೆಲಸ ಆರಂಭಿಸುತ್ತೇನೆ. ಅದೇ ರೀತಿ ಇಂದೂ ಪೂಜೆ ಮಾಡಿದ್ದು, ಇಲ್ಲಿಂದಲೇ ನನ್ನ ರಾಜಕೀಯ ಅಂತ್ಯವಾಗಬಹುದು ಅಥವಾ ಪುನರಾರಂಭವೂ ಆಗಬಹುದು' ಎಂದು ಸಚಿವ ಆನಂದ್ ಸಿಂಗ್ ನಿಗೂಢ ಹೇಳಿಕೆ ನೀಡುವ ಮೂಲಕ ಅವರ ಮುಂದಿನ ನಡೆಯ ಬಗ್ಗೆ ತೀವ್ರ ಕುತೂಹಲ ಮೂಡಿಸಿದ್ದಾರೆ.

ಬುಧವಾರ ಹೊಸಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಖಾತೆ ಹಂಚಿಕೆ'ಯಿಂದ ಅಸಮಾಧಾನಗೊಂಡಿದ್ದು ತಮ್ಮ ಸಚಿವ ಸ್ಥಾನದ ಜೊತೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆಂಬ ದಟ್ಟ ವದಂತಿ ಹಬ್ಬಿತ್ತು. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟ ಉತ್ತರ ನೀಡದೆ `ನನ್ನ ರಾಜಕೀಯ ಆರಂಭವೋ, ಅಂತ್ಯವೋ ಎಲ್ಲವನ್ನೂ ಕೃಷ್ಣ ಪರಮಾತ್ಮ ನಿರ್ಧರಿಸುತ್ತಾನೆ' ಎಂದು ಮಾರ್ಮಿಕವಾಗಿ ನುಡಿದರು.

`2008ರಿಂದ ಇಲ್ಲಿಂದಲೇ ನನ್ನ ರಾಜಕೀಯ ಜೀವನ ಆರಂಭಿಸಿದ್ದೇನೆ. ಇಲ್ಲಿಂದಲೇ ಅಂತ್ಯವಾಗಬಹುದೇನೋ? ವೇಣುಗೋಪಾಲ ಸ್ವಾಮಿ ಕೃಪೆ ಇದ್ದರೆ ಮುಂದುವರಿಯಬಹುದು' ಎಂದು ಪ್ರತಿಕ್ರಿಯೆ ನೀಡಿದ ಆನಂದ್ ಸಿಂಗ್, `ನನ್ನನ್ನು ರಕ್ಷಣೆ ಮಾಡುವವರು ರಾಜಕೀಯದಲ್ಲಿದ್ದಾರೆಂದು ಅಂದುಕೊಂಡಿದ್ದೆ. ಆದರೆ, ಅದೆಲ್ಲ ಭ್ರಮೆ ಎಂದು ಈಗ ನನ್ನ ಅರಿವಿಗೆ ಬಂದಿದೆ. ನಾನು ನನ್ನ ಎಲ್ಲ ಆಸೆ-ಆಕಾಂಕ್ಷೆಗಳನ್ನು ಕಳೆದುಕೊಂಡಿದ್ದೇನೆ. ಆದರೆ, ವಿಶ್ವಾಸ ಕಳೆದುಕೊಂಡಿಲ್ಲ. ಪಕ್ಷಕ್ಕಾಗಲಿ, ನಾಯಕರಿಗಾಗಲಿ ಯಾವುದೇ ಮುಜುಗರವಾಗುವಂತಹ ಹೇಳಿಕೆಗಳನ್ನು ನೀಡಿಲ್ಲ. ನಾನು ಏನು ಹೇಳಬೇಕೆಂಬುದನ್ನು ನಾಲ್ಕು ಗೋಡೆಗಳ ಮಧ್ಯೆ ಹೇಳಿದ್ದೇನೆ' ಎಂದು ತಿಳಿಸಿದರು.

`ನನ್ನ ರಕ್ಷಣೆಗೆ ನನ್ನ ದೇವರಾದ ವೇಣುಗೋಪಾಲಸ್ವಾಮಿ ನಿಲ್ಲುತ್ತಾನೆ ಎಂಬ ಭರವಸೆ ನನಗಿದೆ. ಸದ್ಯ ನಾನು ರಾಜಕೀಯವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆ.8ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಚರ್ಚಿಸಿದ್ದೆ. ನಾನು ಏನು ಹೇಳಬೇಕೋ ಅದೆಲ್ಲವನ್ನೂ ಅವರ ಬಳಿ ಹೇಳಿದ್ದೆ. ಸಾಕಷ್ಟು ಜನ ನನಗೆ ಫೋನ್ ಮಾಡಿದ್ದಾರೆ. ಎಲ್ಲರಿಗೂ ಉತ್ತರ ಕೊಟ್ಟಿದ್ದೇನೆ. ಅವರಲ್ಲಿ ಕ್ಷಮೆ ಯಾಚಿಸಿದ್ದೇನೆ' ಎಂದು ಆನಂದ್ ಸಿಂಗ್ ಪ್ರತಿಕ್ರಿಯೆ ನೀಡಿದರು.

`ಸಿಎಂ ಬೊಮ್ಮಾಯಿ ಅವರ ಭೇಟಿಗೆ ತೆರಳುವ ಬಗ್ಗೆ ನಿರ್ಧರಿಸಿಲ್ಲ. ಇಂದೇ ಹೋಗಬೇಕಾ ಅಥವಾ ನಾಳೆ ಹೋಗಬೇಕಾ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಪಕ್ಷಕ್ಕೆ ಮುಜುಗರವಾಗುವ ರೀತಿ ನಾನು ಎಂದೂ ನಡೆದುಕೊಂಡಿಲ್ಲ. ವಿಜಯನಗರ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕನಾಗಿದ್ದೇನೆ. ನಾನೇನು ದೊಡ್ಡ ರಾಜಕಾರಣಿಯಲ್ಲ. ನನ್ನದೇನೂ ದೊಡ್ಡ ಪ್ರಯಾಣವೂ ಅಲ್ಲ. ರಾಜಕೀಯ ಕ್ಷೇತ್ರದಲ್ಲಿ 15 ವರ್ಷ, ಸಾಮಾಜಿಕ ಕ್ಷೇತ್ರದಲ್ಲಿ 5 ವರ್ಷ ಸೇವೆ ಸಲ್ಲಿಸಿದ್ದೇನೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ನಾನು ಕೇಳಿದ ಎಲ್ಲವನ್ನೂ ಕೊಟ್ಟಿದ್ದಾರೆ. ವಿಜಯನಗರ ಜಿಲ್ಲೆಯನ್ನೂ ಕೊಟ್ಟರು, ಏತ ನೀರಾವರಿಯನ್ನೂ ಕೊಟ್ಟರು' ಎಂದು ಆನಂದ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.

`ನಾವು ಯಾವುದೇ ಸಂಕಲ್ಪ ಮಾಡುವುದಾದರೆ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಪೂಜೆ ಮಾಡಿದ ನಂತರ ಮಾಡುತ್ತೇವೆ. ಅದೇ ರೀತಿ ಇಂದು ಕೂಡ ಪೂಜೆ ಮಾಡಿ ಪ್ರಾರಂಭಿಸಿದ್ದೇವೆ. ಇಲ್ಲಿಂದ ನನ್ನ ರಾಜಕೀಯ ಅಂತ್ಯವಾಗಬಹುದು ಅಥವಾ ಪುನರಾರಂಭವೂ ಆಗಬಹುದು' ಎಂದ ಅವರು, `ನಾನು ಇನ್ನೂ ಹೆಚ್ಚಿಗೆ ಏನನ್ನು ಹೇಳುವುದಿಲ್ಲ. ಕೇಳಿದ ಪ್ರಶ್ನೆಗಳನ್ನೇ ಪದೇ ಪದೇ ನೀವು (ಮಾಧ್ಯಮದವರು) ನನ್ನನ್ನು ಕೇಳಬೇಡಿ' ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News