×
Ad

ಆನಂದ್ ಸಿಂಗ್ ರಾಜೀನಾಮೆ ನೀಡಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

Update: 2021-08-11 17:58 IST

ಬೆಂಗಳೂರು, ಆ.11: ಸಚಿವ ಆನಂದ್ ಸಿಂಗ್ ನನಗೆ ಮುರು ದಶಕದಿಂದ ಗೆಳೆಯರು. ಅವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಮಾತನಾಡುತ್ತಿದ್ದೇನೆ. ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಅವರು ರಾಜೀನಾಮೆ ನೀಡುವ ಪರಿಸ್ಥಿತಿ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬುಧವಾರ ಗೃಹ ಕಚೇರಿ ಕೃಷ್ಣಾ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ಬರಲಿ, ಅವರು ಯಾವುದೋ ಒಂದು ಭಾವನಾತ್ಮಕ ಗಳಿಗೆಯಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಶಾಂತವಾಗಿ ಕೂತು ಮಾತನಾಡಿ, ಎಲ್ಲ ವಿಚಾರಗಳನ್ನು ಸಮಗ್ರವಾಗಿ ಚರ್ಚಿಸೋಣ ಎಂದರು.

'ಕೇವಲ ನಾನೊಬ್ಬನೇ ಅಲ್ಲ, ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಅವರ ಸ್ನೇಹಿತರು ಆನಂದ್ ಸಿಂಗ್ ಜೊತೆ ಮಾತನಾಡಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರದ ಪ್ರಮುಖರು ಅವರ ಜೊತೆ ಮಾತನಾಡುತ್ತಾರೆ. ಅವರು ನಾಳೆ ಬಂದು ನನ್ನನ್ನು ಭೇಟಿ ಮಾಡುವುದಾಗಿ ತಿಳಿಸಿದ್ದರು. ಆದರೆ, ನಾನು ನಾಳೆ ಮಂಗಳೂರಿಗೆ ಹೋಗುತ್ತಿದ್ದೇನೆ. ಆದುದರಿಂದ, ಇಂದೇ ಬನ್ನಿ ಅಥವಾ ನಾಳಿದ್ದು ಬನ್ನಿ ಎಂದು ತಿಳಿಸಿದ್ದೇನೆ' ಎಂದು ಮುಖ್ಯಮಂತ್ರಿ ತಿಳಿಸಿದರು.

'ಆನಂದ್ ಸಿಂಗ್ ಅವರ ವಿಚಾರ ನನಗೆ ಗೊತ್ತಿದೆ. ನಾನು ಕೂಡ ಹಲವು ವಿಚಾರಗಳನ್ನು ಅವರಿಗೆ ತಿಳಿಸಿದ್ದೇನೆ. ಅವರು ಬಂದು ಭೇಟಿ ಮಾಡಿದ ಬಳಿಕ ಎಲ್ಲ ವಿಚಾರ ಸರಿಹೋಗುತ್ತೆ. ಅವರು ರಾಜೀನಾಮೆ ನೀಡಿಲ್ಲ, ಕೇವಲ ಮಾತುಕತೆ ಆಗಿದೆ ಅಷ್ಟೇ. ಯಾರೂ ಯಾವುದೆ ದಾರಿ ಹಿಡಿಯಲ್ಲ. ಎಲ್ಲವೂ ಸರಿಯಾಗುತ್ತೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News