ಕೊಡವರು ಬಂದೂಕು ಹೊಂದುವ ವಿನಾಯಿತಿ ಪ್ರಶ್ನಿಸಿ ಅರ್ಜಿ:ಕೇಂದ್ರ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು, ಆ.11: ಕೊಡವ ಸಮುದಾಯ ಮತ್ತು ಜಮ್ಮಾ ಹಿಡುವಳಿದಾರರು ಬಂದೂಕು ಹೊಂದಲು ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳಿಗೆ ವಿನಾಯಿತಿ ನೀಡಿ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದೆ.
ಕೊಡವರು ಬಂದೂಕು ಹೊಂದುವ ವಿನಾಯಿತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಸೂಚನೆ ನೀಡಿದೆ.
ಕೊಡವರ ನಿಷ್ಠೆ ಮೆಚ್ಚಿ ಬ್ರಿಟಿಷರು ಬಂದೂಕು ಪರವಾನಿಗೆ ನೀಡಿದ್ದರು. ಕೊಡವ ಸಮುದಾಯದವರು ಮತ್ತು ಜಮ್ಮಾ ಹಿಡುವಳಿದಾರರು ಹೇಳಿದಂತೆ ಅದು ಸಂಪ್ರದಾಯ ಅಥವಾ ಸಂಸ್ಕೃತಿ ಆಧಾರದಲ್ಲಿ ದೊರೆತ ವಿನಾಯಿತಿ ಅಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.
ಬ್ರಿಟಿಷರನ್ನು ಒಪ್ಪಿಕೊಳ್ಳದ ಸಮುದಾಯಗಳಿಗೆ ಎಲ್ಲ ಹಕ್ಕುಗಳಿಂದ ವಂಚಿತಗೊಳಿಸಲಾಯಿತು. ಅವರನ್ನು ಒಪ್ಪಿಕೊಂಡವರಿಗೆ ಎಲ್ಲ ಸವಲತ್ತುಗಳನ್ನು ನೀಡಲಾಯಿತು. ಬ್ರಿಟಿಷರ ಆಡಳಿತ ಮುಗಿದು 73 ವರ್ಷಗಳು ಕಳೆದರೂ ವಿನಾಯಿತಿ ಮುಂದುವರಿದಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ವಿಚಾರಣೆಯನ್ನು ಆ.31ಕ್ಕೆ ಮುಂದೂಡಲಾಯಿತು.