×
Ad

ಸ್ಥಳೀಯ ಭಾಷೆಗೆ ನೀಡಬೇಕಾದ ಪ್ರಾಮುಖ್ಯತೆ ನೀಡಲೇಬೇಕು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Update: 2021-08-11 22:25 IST
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು, ಆ. 11: ಭಾರತದ ಯಾವುದೇ ರಾಜ್ಯವಿರಲಿ ಅಲ್ಲಿನ ಸ್ಥಳೀಯ ಭಾಷೆಗೆ ನೀಡಬೇಕಾದ ಪ್ರಾಮುಖ್ಯತೆ ನೀಡಲೇಬೇಕು. ರಾಜ್ಯದ ರಾಜ್ಯಪಾಲರಾಗಿ ಭಾಷೆಯ ಅನುಷ್ಠಾನದ ಪ್ರಸ್ತಾಪ ಬಂದರೆ ಯಾವುದೇ ಸಂಶಯವಿಲ್ಲದೆ ಕನ್ನಡವೇ ಸಾರ್ವಭೌಮ ಎಂಬ ನಿಲುವು ನನಗಿದೆ ಎಂಬುದನ್ನು ಒತ್ತಿ ಹೇಳುತ್ತೇನೆ' ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.

ಬುಧವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹಾಗೂ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ವೇಳೆ ಮಾತನಾಡಿದ ಗೆಹ್ಲೋಟ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡದ ಕೆಲಸಗಳಿಗೆ ಅವರ ಸಹಕಾರ ಇರುತ್ತದೆ ಎಂದು ಸಮ್ಮತಿಸಿದರು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಆದೇಶದನ್ವಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಮುಖ ಪ್ರಕಟಣೆಗಳು ಹಾಗೂ ಪ್ರಾಧಿಕಾರದ ಕಾರ್ಯಯೋಜನೆಗಳ ಅವಲೋಕನ ಕೈಪಿಡಿಗಳನ್ನು ಉಡುಗೊರೆಯಾಗಿ ನೀಡಿದರು.

ಕರ್ನಾಟಕದ ಆಡಳಿತದಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನದಲ್ಲಿ ಅವರ ಸಹಕಾರ ಮತ್ತು ಕನ್ನಡಿಗರ ತಾರ್ಕಿಕ ಸಮಸ್ಯೆಗಳಾಗಿ ಉಳಿದಿರುವ ಉದ್ಯೋಗದಲ್ಲಿ ಸ್ಥಳೀಯ ಕನ್ನಡಿಗರಿಗೆ ಆದ್ಯತೆ, ಶಿಕ್ಷಣ ವಲಯದಲ್ಲಿ ಕಡ್ಡಾಯ ಕನ್ನಡ ಕಲಿಕಾ ಅಧಿನಿಯಮದ ಸಂಪೂರ್ಣ ಅನುಷ್ಠಾನ, ತಂತ್ರಜ್ಞಾನದಲ್ಲಿ ಕನ್ನಡ ತಂತ್ರಾಂಶಗಳ ಆವಿಷ್ಕಾರ ಮತ್ತು ಬಳಕೆ ಇನ್ನೂ ಮುಂತಾದ ಮೂಲಭೂತ ಬೇಡಿಕೆಗಳುಳ್ಳ ಮನವಿಯನ್ನು ಸಲ್ಲಿಸಿ, ಕನ್ನಡದ ಅಸ್ಮಿತೆಯ ಉಳಿವಿಗೆ ಪ್ರಾಧಿಕಾರದ ಕಾರ್ಯಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕೆಂದು ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News