ಸಾವಿನಲ್ಲೂ ಸಾರ್ಥಕತೆ: ಅಪಘಾತದಲ್ಲಿ ಮೃತಪಟ್ಟಿದ್ದ ಬಿಡದಿಯ ರೈತನ 6 ಅಂಗಾಂಗಳ ದಾನ
ಬೆಂಗಳೂರು, ಆ. 11: ರಸ್ತೆ ಅಪಘಾತಕ್ಕೆ ತುತ್ತಾಗಿ ಸತತ 7 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ 43 ವರ್ಷದ ವ್ಯಕ್ತಿ 6 ಅಂಗಾಂಗಗಳನ್ನು ದಾನ ಮಾಡುವ ಮೂಲಕ ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಜನರನ್ನು ರಕ್ಷಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಈ ವ್ಯಕ್ತಿ ಅಪಘಾತಕ್ಕೀಡಾಗಿ ಟ್ರೊಮ್ಯಾಟಿಕ್ ಬ್ರೇನ್ ಇಂಜುರಿ(ಟಿಬಿಐ)ನಿಂದ ಬಳಲುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿಯೂ ನಂಜುಂಡಯ್ಯ ಅವರ ಕುಟುಂಬ ಸದಸ್ಯರು ಆತನ 6 ಅಂಗಾಂಗಗಳನ್ನು ದಾನ ಮಾಡಿ ಅಂಗಾಂಗಗಳಿಗಾಗಿ ಕಾಯುತ್ತಿದ್ದ ರೋಗಿಗಳಿಗೆ ಜೀವದಾನ ಮಾಡಿದ್ದಾರೆ. ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿ ಗಂಭೀರ ಸ್ಥಿತಿಯಲ್ಲಿದ್ದ ನಂಜುಂಡಯ್ಯರನ್ನು ಜು.26ರಂದು ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್‍ಗೆ ದಾಖಲಿಸಲಾಯಿತು.
ಅವರ ಗಂಭೀರ ಸ್ವರೂಪದ ಆರೋಗ್ಯ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ನ್ಯೂರೋಲಾಜಿಸ್ಟ್‍ಗಳ ತಂಡ, ಇಂಟೆನ್ಸಿವ್ ಕೇರ್ ಯೂನಿಟ್, ಆರ್ಥೋಪೆಡಿಕ್ ಸರ್ಜನ್ ಮತ್ತು ನರ್ಸ್‍ಗಳು ತುಂಬಾ ಕಾಳಜಿ ವಹಿಸಿ ಚಿಕಿತ್ಸೆಯನ್ನು ನೀಡಿದರು. ಆದರೆ, ಅವರು ಟ್ರೊಮ್ಯಾಟಿಕ್ ಬ್ರೇನ್ ಇಂಜುರಿಯಿಂದಾಗಿ ಆ.2ರಂದು ಕೊನೆ ಉಸಿರೆಳೆದರು. ತಮ್ಮ ಕುಟುಂಬ ಸದಸ್ಯನನ್ನು ಕಳೆದುಕೊಂಡ ದುಃಖದಲ್ಲಿದ್ದರೂ ಆತನ ಕುಟುಂಬದವರು ಶ್ವಾಸಕೋಶಗಳು, ಮೂತ್ರಪಿಂಡ, ಲಿವರ್, ಹೃದಯ ವಾಲ್ವ್, ಕಾರ್ನಿಯಸ್, ಚರ್ಮವನ್ನು ಜೀವ ಸಾರ್ಥಕತೆ ಮೂಲಕ ದಾನ ಮಾಡಿದರು.
ಈ ಪೈಕಿ ಮೂತ್ರಪಿಂಡ ಮತ್ತು ಲಿವರ್ ಅನ್ನು ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್‍ನಲ್ಲಿ ಅಂಗಾಂಗಳಿಗೆ ಕಾಯುತ್ತಿದ್ದ ರೋಗಿಗಳಿಗೆ ಅಂದೇ ಕಸಿ ಮಾಡಲಾಯಿತು. ಆಸ್ಪತ್ರೆಯ ಸಿಇಒ ಸಂದೀಪ್ ಕುಮಾರ್ ಅವರು ಮಾತನಾಡಿ, ರಸ್ತೆ ಸಂಚಾರ ಅಪಘಾತಗಳಿಂದ ಅತ್ಯಧಿಕ ಟ್ರೊಮ್ಯಾಟಿಕ್ ಬ್ರೇನ್ ಇಂಜುರಿಗಳಾಗುವುದು. ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿಯೆ ಹೆಚ್ಚು. ಅಪಘಾತದ ಸಂದರ್ಭದಲ್ಲಿ ಕೇವಲ ನರವೈಜ್ಞಾನಿಕ ಹಾನಿಯ ಒಂದು ಭಾಗ ಮಾತ್ರ ಸಂಭವಿಸುತ್ತದೆ ಎಂದು ನಂಬಲಾಗಿದೆ. ಇದಕ್ಕೆ ತಕ್ಷಣದ ವೈದ್ಯಕೀಯ ನೆರವಿನೊಂದಿಗೆ ಸ್ವಲ್ಪಮಟ್ಟಿಗೆ ಪುನಶ್ಚೇತನ ಅಂದರೆ ಗುಣಪಡಿಸಬಹುದು ಎಂದರು.
ಬಿಡದಿಯ ರೈತ ನಂಜುಂಡಯ್ಯ ತೀವ್ರ ಮಿದುಳಿನ ಗಾಯದಿಂದ ಬಳಲುತ್ತಿದ್ದ ರೋಗಿಯು ಆಸ್ಪತ್ರೆಗೆ ದಾಖಲಾದರು. ಎಲ್ಲ ಪ್ರಯತ್ನಗಳನ್ನು ನಡೆಸಿದಾಗ್ಯೂ, ಮಿದುಳಿನ ಕಾರ್ಯನಿರ್ವಹಣೆ ಪುನಶ್ಚೇತನಗೊಳ್ಳಲೇ ಇಲ್ಲ. ಈ ಹಿನ್ನೆಲೆಯಲ್ಲಿ ಬ್ರೇನ್ ಡೆತ್ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಸುದೀರ್ಘವಾದ ಚರ್ಚೆಯ ನಂತರ ಕುಟುಂಬದವರು ಅಂಗಾಂಗ ದಾನ ಮಾಡಲು ನಿರ್ಧರಿಸಿದರು. ಅವರ ಈ ನಿರ್ಧಾರದಿಂದಾಗಿ ಆರು ರೋಗಿಗಳಿಗೆ ಜೀವದಾನ ನೀಡಿದಂತಾಗಿದೆ' ಎಂದು ನಿರ್ದೇಶಕ ಡಾ.ಎನ್.ಕೆ. ವೆಂಕಟರಮಣ ಮೆಚ್ಚುಗೆ ವ್ಯಕ್ತಪಡಿಸಿದರು.