ಅನುದಾನಕ್ಕೆ ಆಗ್ರಹಿಸಿ ಸಚಿವ ಅಶೋಕ್ ಮುಂದೆಯೇ ಕಣ್ಣೀರಿಟ್ಟ ಆಡಳಿತ ಪಕ್ಷದ ಶಾಸಕ

Update: 2021-08-12 12:47 GMT

ಬೆಂಗಳೂರು: ನೆರೆಪೀಡಿತ ಪ್ರದೇಶಗಳ ಪರಿಹಾರ ತಾರತಮ್ಯ ನಿವಾರಿಸಲು ಒತ್ತಾಯಿಸಿ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಅವರು ವಿಧಾನ ಸೌಧ ಮತ್ತು ವಿಕಾಸಸೌಧ ಮಧ್ಯೆ ಇರುವ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ್ದು, ಸ್ಥಳಕ್ಕೆ ಧಾವಿಸಿದ ಕಂದಾಯ ಸಚಿವ ಆರ್.ಅಶೋಕ್ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ. 

`ನನ್ನ ಕ್ಷೇತ್ರದಲ್ಲಿ ಹೆಚ್ಚು ಮಳೆ ಬಿದ್ದರೆ ಭದ್ರ ಅಣೆಕಟ್ಟು ಮತ್ತು ಹೇಮಾವತಿ ಅಣೆಕಟ್ಟು ಭರ್ತಿಯಾಗುತ್ತವೆ. ಆದರೆ, ನನ್ನ ಕ್ಷೇತ್ರಕ್ಕೆ ಮೂರು ವರ್ಷಗಳಿಂದ ಬಿಡಿಗಾಸು ಅನುದಾನ ನೀಡಿಲ್ಲ ಏಕೆ? ನಾನು ಹಿರಿಯ ಶಾಸಕ. ನನಗೆ ಹೀಗೆ ಮಾಡುವುದು ಎಷ್ಟು ಸರಿ. ಕ್ಷೇತ್ರಕ್ಕೆ ಅನುದಾನ ನೀಡಲು ಸಾಧ್ಯವಿಲ್ಲ ಎಂದರೆ ಜನರಿಗೆ ಹೇಗೆ ಮುಖ ತೋರಿಸಬೇಕು' ಎಂದು ಕುಮಾರಸ್ವಾಮಿ, ಸಚಿವ ಅಶೋಕ್ ಮುಂದೆಯೇ ಕಣ್ಣೀರಿಟ್ಟ ಪ್ರಸಂಗವು ನಡೆಯಿತು.

`ಮೂಡಿಗೆರೆ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಮಳೆ ಬಿದ್ದ ಪರಿಣಾಮ ಕ್ಷೇತ್ರದಲ್ಲಿ ರಸ್ತೆ, ಸೇತುವೆ ಸಹಿತ 50 ಕೋಟಿ ರೂ.ಗಳಿಗೂ ಹೆಚ್ಚು ಹಾನಿಯಾಗಿದೆ. ಆದರೆ, `ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಿದಿದ್ದಲ್ಲ' ಎಂದು ಎನ್‍ಡಿಆರ್‍ಎಫ್ ಮತ್ತು ಎಸ್‍ಟಿಆರ್‍ಎಫ್‍ನಿಂದ ಮೂಡಿಗೆರೆ ಕ್ಷೇತ್ರವನ್ನು ಹೊರಗಿಟ್ಟು ಶಿವಮೊಗ್ಗ, ಸೊರಬ ಮತ್ತು ಶೃಂಗೇರಿ ಕ್ಷೇತ್ರಗಳನ್ನು ಆ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

`ಮೂಡಿಗೆರೆ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವೆಂದು ನಿರ್ಲಕ್ಷ್ಯ ಮಾಡಲಾಗುತ್ತಿದೆ. ನಮ್ಮ ಪಕ್ಷವೇ ಅಧಿಕಾರದಲ್ಲಿದ್ದರೂ ಅನುದಾನ ಹಂಚಿಕೆಯಲ್ಲಿ ನನ್ನ ಕ್ಷೇತ್ರಕ್ಕೆ ತಾರತಮ್ಯ ಮಾಡಲಾಗುತ್ತಿದೆ. ನನ್ನ ಕ್ಷೇತ್ರವೂ ಸಾಮಾನ್ಯ ಆಗಬೇಕಿತ್ತು ಎಂದು ಅನಿಸುತ್ತದೆ ಎಂದ ಅವರು, 2019ರಲ್ಲಿ ಅತಿಯಾದ ಅತಿವೃಷ್ಟಿ ಆಗಿತ್ತು. ಏಳು ಜನ ಮನೆ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಮನೆಗಳು ಕಾಫಿತೋಟ ಕೊಚ್ಚಿಕೊಂಡು ಹೋಗಿತ್ತು. ಆದರೂ ಪರಿಹಾರ ನೀಡದೇ ನಿರ್ಲಕ್ಷ್ಯ ಮಾಡಲಾಗಿತ್ತು' ಎಂದು ದೂರಿದರು.

ಮೂಡಿಗೆರೆಯಲ್ಲಿ 900 ಸೆಂ.ಮೀ ಮಳೆಯಾಗಿದೆ. ನಾನು 2018ರಲ್ಲಿ ಶಾಸಕನಾದಾಗ ಕುಮಾರಸ್ವಾಮಿ ಸಿಎಂ ಆಗಿದ್ದರು. ಆಗ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಆಗಿತ್ತು. ಆದರೆ ನಮ್ಮದೇ ಸರಕಾರ ಇದ್ದರೂ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಹೀಗಾಗಿ ಕೂಡಲೇ ಈ ಅನ್ಯಾಯವನ್ನು ಸರಿಪಡಿಸಬೇಕು. ರಸ್ತೆ, ಸೇತುವೆ ದುರಸ್ತಿಗೆ ಎನ್‍ಡಿಆರ್‍ಎಫ್ ಮತ್ತು ಎಸ್‍ಟಿಆರ್‍ಎಫ್‍ನಿಂದ ಹಣ ಬಿಡುಗಡೆ ಮಾಡಬೇಕು' ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಆ ಬಳಿಕ ಕುಮಾರಸ್ವಾಮಿ ಅವರನ್ನು ಸಮಾಧಾನಪಡಿಸಿದ ಸಚಿವ ಆರ್.ಅಶೋಕ್, ಎನ್‍ಡಿಆರ್‍ಎಫ್ ಮತ್ತು ಎಸ್‍ಟಿಆರ್‍ಎಫ್ ಪಟ್ಟಿಗೆ ಮೂಡಿಗೆರೆ ಕ್ಷೇತ್ರವನ್ನು ಸೇರ್ಪಡೆ ಮಾಡಲಾಗುವುದು. ಅಲ್ಲದೆ, ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಒದಗಿಸಲು ಸರಕಾರ ಕ್ರಮ ವಹಿಸಲಿದೆ ಎಂದು ಭರವಸೆ ನೀಡಿ, ತಮ್ಮೊಂದಿಗೆ ಕುಮಾರಸ್ವಾಮಿ ಅವರನ್ನು ತನ್ನ ಕಚೇರಿಗೆ ಕರೆದೊಯ್ದು ಚರ್ಚಿಸಿ ಅನುದಾನ ಬಿಡುಗಡೆ ಆಶ್ವಾಸನೆ ನೀಡಿದ್ದರಿಂದ ತಮ್ಮ ಧರಣಿಯನ್ನು ಕುಮಾರಸ್ವಾಮಿ ಕೈಬಿಟ್ಟರು.

`ನನಗೆ ಸಚಿವ ಸ್ಥಾನವನ್ನಂತೂ ಕೊಡಲಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಮೂರು ವರ್ಷಗಳಿಂದ ಅನುದಾನವನ್ನು ನೀಡುತ್ತಿಲ್ಲ. ಅತ್ಯಂತ ಹೆಚ್ಚು ಮಳೆ ಬಿದ್ದ ಪರಿಣಾಮ 50 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನಷ್ಟವಾಗಿದ್ದು, ರಸ್ತೆ, ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಆದರೆ, ಮೂಡಿಗೆರೆ ಕ್ಷೇತ್ರ ಎನ್‍ಡಿಆರ್‍ಎಫ್ ಮತ್ತು ಎಸ್‍ಟಿಆರ್‍ಎಫ್ ವ್ಯಾಪ್ತಿಗೆ ಬರುವುದಿಲ್ಲ. ಬದಲಿಗೆ ಶಿವಮೊಗ್ಗ ನಗರ, ಸೊರಬ ಕ್ಷೇತ್ರವನ್ನು ಆ ವ್ಯಾಪ್ತಿಗೆ ಸೇರಿಸಲಾಗಿದೆ. ಮೀಸಲು ಕ್ಷೇತ್ರ ಎಂದು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬುದು ನನ್ನ ಭಾವನೆ. ಹೀಗಾಗಿ ಕೂಡಲೇ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಬೇಕು. ಇಲ್ಲವಾದರೆ ಎಂಟು ದಿನ ಬಿಟ್ಟು ಮತ್ತೆ ಪ್ರತಿಭಟನೆ ಮಾಡುತ್ತೇನೆ' ಎಂದು ಎಚ್ಚರಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News