ಸರಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪ ನಿಂತಿಲ್ಲ: ಶಾಸಕ ಯತ್ನಾಳ್
ಹುಬ್ಬಳ್ಳಿ, ಆ. 12: ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಸರಕಾರದಲ್ಲಿ ಇನ್ನೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಇನ್ನೊಂದು ವಾರ ಇರಿ ಎಲ್ಲವನ್ನು ಹೇಳುತ್ತೇನೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇದೀಗ ಹಿಂದೂ ವಿರೋಧಿ ಸಿಎಂ ಆಗಿದ್ದಾರೆಂಬ ನೋವು ಕಾರ್ಯಕರ್ತರಲ್ಲಿದೆ. ಯಾರು ಹಿಂದೆ ಹೊಡೆಸಿದ್ದರು, ಯಾರು ಹೊಡೆತ ತಿಂದಿದ್ದರು ಎಂಬುದು ಎಲ್ಲರಿಗೂ ಗೊತ್ತು. ಪಕ್ಷಕ್ಕೆ ಹಾನಿಯಾಗಬಾರದು ಎಂದು ಹೈಕಮಾಂಡ್ ಈ ನಿರ್ಣಯ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ದವೇ ಪರೋಕ್ಷವಾಗಿ ಆಕ್ರೋಶ ಹೊರಹಾಕಿದರು.
ಈ ಹಿಂದೆ ಕಮ್ಯುನಿಸ್ಟ್ ಪಕ್ಷದಲ್ಲಿ ಕೆಲವರು ಇದೀಗ ಬಿಜೆಪಿಗೆ ಬಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಹೋಗುವ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದ ಅವರು, ನಮ್ಮ ಬೇಡಿಕೆ ಸಿಎಂ ಬದಲಾವಣೆ ಆಗಬೇಕು ಎಂಬುದು ಆಗಿತ್ತು. ಅದು ಆಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಯಡಿಯೂರಪ್ಪನವರ ನೆರಳು ಆಗುವುದಿಲ್ಲ. ಅವರಿಗೆ ಸ್ವಲ್ಪ ಸಮಯ ಕೊಡಬೇಕು. ಈ ಹಿಂದೆ ಮೂರು ಮಂದಿ ಉಪಮುಖ್ಯಮಂತ್ರಿಗಳಿದ್ದರು. ಅವರ ನೇತೃತ್ವದಲ್ಲೆ ಚುನಾವಣೆ ಎನ್ನುತ್ತಿದ್ದರು. ಇದೀಗ ಡಿಸಿಎಂ ಸ್ಥಾನವೇ ಇಲ್ಲ. ಮುಂದಿನ ತೀರ್ಮಾನಗಳನ್ನು ವರಿಷ್ಠರು ಕೈಗೊಳ್ಳಲಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
`ಬಿಜೆಪಿ ಪಕ್ಷದೊಳಗೆ ನನ್ನನ್ನು ಯಾರೂ ಚಿವುಟಿಲ್ಲ. ಯಾರಾದರೂ ಚಿವುಟಲು ಬಂದರೆ ಕಪಾಳಕ್ಕೆ ಹೊಡೆಯುವ ಮಗ ನಾನು. ನನ್ನ ವಿರೋಧ ಕಟ್ಟಿಕೊಂಡಿದ್ದಕ್ಕೆ ಯಡಿಯೂರಪ್ಪ ಸಿ.ಎಂ.ಹುದ್ದೆಯಿಂದ ಕೆಳಗಿಳಿದರು. ಅವರಿಗೆ ವಿರುದ್ಧವಾಗಿದ್ದಕ್ಕೆ ನಾನು ಸಚಿವನಾಗಲಿಲ್ಲ. ನನ್ನ ನಾಲಿಗೆ ಸರಿ ಇಲ್ಲ. ಅದಕ್ಕಾಗಿ ಸಚಿವ ಸ್ಥಾನ ಸಿಗಲಿಲ್ಲ ಎಂದು ಕೆಲವರು ಹೇಳುತ್ತಾರೆ. ನಾಲಿಗೆ ಸರಿ ಇದ್ದಿದ್ದಕ್ಕಾಗಿಯೇ ರಾಜ್ಯದಲ್ಲಿ ಇಷ್ಟೆಲ್ಲಾ ಬದಲಾವಣೆಗಳಾಗಿವೆ'
-ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಶಾಸಕ