ಸಂವಿಧಾನದ ಆಶಯಗಳನ್ನು ಈಡೇರಿಸುವ ಶಪಥ ಮಾಡಬೇಕು: ಸಿದ್ದರಾಮಯ್ಯ

Update: 2021-08-12 15:08 GMT

ಬೆಂಗಳೂರು, ಆ.12: ನಾನು ಯಾವತ್ತೂ ಜನ್ಮದಿನ ಆಚರಿಸಿಕೊಂಡವನಲ್ಲ, ನನ್ನ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಪ್ರೀತಿಯಿಂದ ಶುಭ ಹಾರೈಸಲು ನನ್ನ ಮನೆಗೆ ಬರುತ್ತಾರೆ. ಅವರನ್ನು ಭೇಟಿ ಮಾಡುತ್ತಿದ್ದೇನೆ. ನಾನು ಐದನೇ ತರಗತಿಗೆ ನೇರವಾಗಿ ದಾಖಲಾತಿ ಆದ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಬರೆದುಕೊಂಡ ಪ್ರಕಾರ ನನಗೀಗ 74 ವರ್ಷ ತುಂಬಿ 75 ನೇ ವರ್ಷಕ್ಕೆ ಕಾಲಿಟ್ಟಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಗುರುವಾರ ನಗರದ ಕುಮಾರಪಾರ್ಕ್ ಬಳಿಯಿರುವ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು, ಕಾರ್ಯಕರ್ತರು, ರಾಜಕೀಯ ಮುಖಂಡರಿಂದ ಶುಭಾಶಯ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಹಿಂದಿನ 74 ವರ್ಷಗಳ ಇತಿಹಾಸವನ್ನು ಹಿಂತಿರುಗಿ ನೋಡಬೇಕು. ಸಂವಿಧಾನದ ಆಶಯಗಳು ಈಡೇರಿವೆಯೋ ಇಲ್ಲವೋ ಎಂಬುದನ್ನು ಗಮನಿಸಿ, ಈಡೇರದೇ ಇದ್ದರೆ ಅದನ್ನು ಈಡೇರಿಸುವ ಶಪಥ ಮಾಡಬೇಕು. ದೇಶದಲ್ಲಿ ಪ್ರಮುಖ ದಿನಗಳ ಆಚರಣೆಯ ಉದ್ದೇಶ ಸಾಮಾಜಿಕ, ಆರ್ಥಿಕ ಬದಲಾವಣೆ ಮಾಡುವ ಸಂಕಲ್ಪ ಮಾಡಬೇಕೆಂಬುದು ಎಂದು ಅವರು ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಪಾಲ್ಗೊಂಡವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿಯಾಗಲೀ, ಅಧಿಕಾರ ಪಡೆಯಬೇಕೆಂಬ ಉದ್ದೇಶದಿಂದಾಗಲೀ ಹೋರಾಟ ಮಾಡಿಲ್ಲ. ಬ್ರಿಟಿಷರು ದೇಶದಿಂದ ತೊಲಗಬೇಕು, ನಮ್ಮ ಭವಿಷ್ಯವನ್ನು ರೂಪಿಸುವ ಸ್ವಾತಂತ್ರ್ಯ ನಮಗೆ ಸಿಗಬೇಕು ಎಂಬ ಧ್ಯೇಯದೊಂದಿಗೆ ತ್ಯಾಗ, ಬಲಿದಾನ ಮಾಡಿದ್ದಾರೆ. 75ನೇ ಸ್ವಾತಂತ್ರ್ಯೋತ್ಸವದಂದು ನಾವೆಲ್ಲ ದೇಶ ಕಟ್ಟುವ, ಸಮಾಜದಲ್ಲಿ ಸೌಹಾರ್ದತೆ, ಸಾಮರಸ್ಯ, ಬ್ರಾತೃತ್ವ ಭಾವನೆಯನ್ನು ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ನಾವು ಸ್ವಾತಂತ್ರ್ಯ ಹೋರಾಟಗಾರರಲ್ಲ, ನಾವೆಲ್ಲಾ ಸ್ವಾತಂತ್ರ್ಯದ ಫಲಾನುಭವಿಗಳು. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ನಿಸ್ವಾರ್ಥವಾಗಿ ಪಾಲ್ಗೊಂಡವರ ಹೆಜ್ಜೆ ಗುರುತುಗಳನ್ನು ನಾವು ಅರ್ಥಮಾಡಿಕೊಂಡು, ಅವರ ದಾರಿಯಲ್ಲಿ ಸಾಗುವ ಪ್ರಯತ್ನ ಮಾಡಬೇಕು ಎಂದು ಅವರು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News