ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸದಿದ್ದರೆ ಅ.1ರಿಂದ ಧರಣಿ: ಬಸವಜಯ ಮೃತ್ಯುಂಜಯ ಶ್ರೀ

Update: 2021-08-12 17:10 GMT

ಹುಬ್ಬಳ್ಳಿ, ಆ.12: ಪಂಚಮಸಾಲಿ ಸಮಾಜಕ್ಕೆ ಮುಂದಿನ ಸೆ.30ರೊಳಗೆ 2ಎ ಮೀಸಲಾತಿ ಘೋಷಿಸದಿದ್ದರೆ, ಅ.1ರಿಂದ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಗುರುವಾರ ಹುಬ್ಬಳ್ಳಿ ನಗರದಲ್ಲಿ ಪಂಚಮಸಾಲಿ ಸಮಾಜದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ಪಂಚಮಸಾಲಿ ಸಮಾಜದ ಧರಣಿ ವೇಳೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಇಂದು ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದಾರೆ. ಹೀಗಾಗಿ, ಅವರೇ ಭರವಸೆಯನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ. ಈ ಭರವಸೆ ಈಡೇರದಿದ್ದರೆ ಅ.1ರಿಂದ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಹೇಳಿದರು.  

ಶಿಗ್ಗಾಂವಿಯಲ್ಲಿ ಬೊಮ್ಮಾಯಿ 3 ಬಾರಿ ಗೆಲ್ಲಲು ನಮ್ಮ ಸಮಾಜ ಕಾರಣ. ಪಂಚಮಸಾಲಿ ಸಮುದಾಯಕ್ಕೆ ಸೇರಿದವರಿಗೆ ಮುಖ್ಯಮಂತ್ರಿ ಸ್ಥಾನ ಲಭಿಸದ ಕಾರಣ ಬೇಸರವಿದೆ. ಈ ಬೇಸರ ನಿವಾರಣೆ ಆಗಬೇಕಾದರೆ ಮೀಸಲಾತಿ ನೀಡಬೇಕು ಎಂದು ಸಲಹೆ ಮಾಡಿದರು.
ಯಾರು ಪಂಚಮಸಾಲಿಗಳ ವಿಶ್ವಾಸ ಉಳಿಸಿಕೊಳ್ಳುತ್ತಾರೋ ಅವರು ಎತ್ತರದ ಸ್ಥಾನಕ್ಕೆ ಹೋಗುತ್ತಾರೆ. ಕೆಲವೊಂದು ಸ್ವಾಮೀಜಿಗಳು ದುಡ್ಡು ಕೊಟ್ಟು ಟಿವಿಯಲ್ಲಿ ಪ್ರಚಾರ ಪಡೆದುಕೊಂಡಿದ್ದಾರೆ. ಆದರೆ, ನಾವು ಹೋರಾಟ ಕೈ ಬೀಡಲಿಲ್ಲ. ಈ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿಸಿದರು. 
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ನಮ್ಮ ಪಂಚಮಸಾಲಿ ಹೋರಾಟದ ಫಲವಾಗಿ ಕೇಂದ್ರ ಮೀಸಲಾತಿ ಹಕ್ಕನ್ನು ರಾಜ್ಯ ಸರಕಾರಗಳಿಗೆ ನೀಡಿದೆ ಎಂದರು. 


ಬೇಡಿಕೆ ಈಡೇರಲಿದೆ

‘ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಆ.15ರ ಬಳಿಕ ಮುಖ್ಯಮಂತ್ರಿ ಮತ್ತು ಬಸವ ಮೃತ್ಯುಂಜಯ ಸ್ವಾಮೀಜಿ ಭೇಟಿಗೆ ವ್ಯವಸ್ಥೆ ಮಾಡುವೆ. ಸರಕಾರದಿಂದ ಸಮಾಜದ ಬೇಡಿಕೆ ಈಡೇರಲಿದ್ದು, ಸಮುದಾಯದವರು ತಾಳ್ಮೆಯಿಂದ ಕಾಯಬೇಕು.’ 

-ಸಿ.ಸಿ.ಪಾಟೀಲ, ಲೋಕೋಪಯೋಗಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News