ರಿಕ್ಷಾ, ಬಸ್ ಚಾಲಕರು ಮೃತಪಟ್ಟರೆ 5ಲಕ್ಷ ರೂ.ಪರಿಹಾರ: ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ; ಸಚಿವ ಶಿವರಾಮ್ ಹೆಬ್ಬಾರ್

Update: 2021-08-13 11:54 GMT

ಬೆಂಗಳೂರು, ಆ. 13: `ರಾಜ್ಯದಲ್ಲಿನ ಆಟೋರಿಕ್ಷಾ ಮತ್ತು ಬಸ್ ಚಾಲಕರು ಹಾಗೂ ತಾಂತ್ರಿಕ ಸಿಬ್ಬಂದಿ ಅಪಘಾತ, ಅನಾರೋಗ್ಯ, ಕರ್ತವ್ಯದಲ್ಲಿದ್ದ ವೇಳೆ ಸಾವನ್ನಪ್ಪಿದರೆ ಸರಕಾರದಿಂದ 5ಲಕ್ಷ ರೂ. ಪರಿಹಾರ ನೀಡುವ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು' ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಒಂದು ಕಾಲಕ್ಕೆ ನಾನೇ ಚಾಲಕನಾಗಿ ಕೆಲಸ ಮಾಡಿದ್ದೆ. ಕಾರ್ಮಿಕರ ಕಷ್ಟಗಳು ಏನೆಂಬುದು ನನಗೆ ಗೊತ್ತು. ಹೀಗಾಗಿ ಕಾರ್ಮಿಕರು ಮೃತಪಟ್ಟರೆ 5 ಲಕ್ಷ ರೂ.ಪರಿಹಾರ ನೀಡುವ ಹೊಸ ಮಸೂದೆಯನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

`ಕಾರ್ಮಿಕ ಇಲಾಖೆಯಲ್ಲಿ ನಾನು ದೃಢ ಹೆಜ್ಜೆ ಇಡಬೇಕೆಂದು ಸಂಕಲ್ಪ ಮಾಡಿದ್ದೇನೆ. ಹೀಗಾಗಿಯೆ ಈ ಮಸೂದೆಯನ್ನು ಜಾರಿ ಮಾಡಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ಈಗಾಗಲೇ ಇಲಾಖೆಯಲ್ಲಿ ರೂಪು-ರೇಷೆಗಳನ್ನು ಸಿದ್ಧಪಡಿಸಲಾಗಿದೆ. ಇದರಿಂದ ಕಾರ್ಮಿಕ ವರ್ಗಕ್ಕೆ ಬಹುದೊಡ್ಡ ಅನುಕೂಲವಾಗಲಿದೆ' ಎಂದ ಅವರು, ಕಾರ್ಮಿಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ನೀಡುವ ಸಹಾಯಧನವನ್ನು ದುಪ್ಪಟ್ಟು ಮಾಡಲಾಗಿದೆ. ಕಾರ್ಮಿಕರ ಹಿತವನ್ನು ಕಾಪಾಡುವುದು ನನ್ನ ಮೊದಲ ಆದ್ಯತೆ' ಎಂದರು.

`ಕಾರ್ಮಿಕ ಇಲಾಖೆಗೆ ಸಂಬಂಧಪಟ್ಟಂತೆ ಇನ್ನು ಮುಂದೆ ಜಾಗೃತಿ ಜಾಥಾವನ್ನು ರಚನೆ ಮಾಡಲಾಗುವುದು. ವಲಸೆ ಕಾರ್ಮಿಕರಿಗೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ವಸತಿ ಸಮುಚ್ಚಯ ಕಟ್ಟಲು ತೀರ್ಮಾನಿಸಲಾಗಿದೆ ಎಂದು ಪ್ರಕಟಿಸಿದರು. ಕಾರ್ಮಿಕ ಇಲಾಖೆಗೆ ಸಂಬಂಧಪಟ್ಟಂತೆ ನೀಡುತ್ತಿರುವ ವಿವಿಧ ಸಹಾಯಧನ ದುಪ್ಪಟ್ಟು ಮಾಡಲು ತೀರ್ಮಾನ ಮಾಡಲಾಗಿದೆ. ಕಾರ್ಮಿಕ ಇಲಾಖೆಯ ವಿಜಲೆನ್ಸ್ ಸೆಲ್ ಮಾಡಲಾಗುತ್ತದೆ' ಎಂದು ಅವರು ವಿವರಿಸಿದರು.

`ಕಾಂಗ್ರೆಸ್-ಜೆಡಿಎಸ್ ಪಕ್ಷ ತ್ಯಜಿಸಿ ಬಂದ ನಮ್ಮ ಗೆಳೆಯರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ಅತಿಶೀಘ್ರದಲ್ಲಿ ಒಳ್ಳೆಯ ತೀರ್ಮಾನ ಕೈಗೊಳ್ಳುತ್ತಾರೆ. ನಮ್ಮ ಸ್ನೇಹಿತರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ಭರವಸೆ ಇದೆ' ಎಂದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ನ್ಯಾಯಾಲಯದಲ್ಲಿದೆ. ಎಲ್ಲವೂ ಮುಗಿದ ಮೇಲೆ ಸಚಿವ ಸ್ಥಾನ ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.


ಇಂದಿರಾ ಮೇಲೆ ಮಮತೆಯೂ ಇಲ್ಲ, ದ್ವೇಷವೂ ಇಲ್ಲ

`ನಾಳೆಯೇ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾವಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲಿಯೂ ಹೇಳಿಲ್ಲ. ಮುಖ್ಯಮಂತ್ರಿ ಈ ಕುರಿತು ನಿರ್ಣಯ ಕೈಗೊಳ್ಳುತ್ತಾರೆ. ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಇನ್ನು ಇಂದಿರಾ ಗಾಂಧಿ ಅವರ ಮೇಲೆ ನಮಗೆ ಮಮತೆಯೂ ಇಲ್ಲ, ದ್ವೇಷವೂ ಇಲ್ಲ. ಸಿ.ಟಿ.ರವಿ ಇನ್ನಿತರರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ.' 

-ಶಿವರಾಮ್ ಹೆಬ್ಬಾರ್, ಕಾರ್ಮಿಕ ಸಚಿವ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News