×
Ad

`ಸೋಲಾರ್' ಹಗರಣ ಸಹಿತ ಹಿಂದಿನ ಸರಕಾರಗಳ ಅವಧಿಯಲ್ಲಿನ ಅವ್ಯವಹಾರ ತನಿಖೆ: ಇಂಧನ ಸಚಿವ ಸುನೀಲ್ ಕುಮಾರ್

Update: 2021-08-13 17:50 IST
ಫೈಲ್ ಚಿತ್ರ

ಬೆಂಗಳೂರು, ಆ. 13: `ಸೋಲಾರ್ ವಿದ್ಯುತ್ ಯೋಜನೆ ಸೇರಿದಂತೆ ಹಿಂದಿನ ಸರಕಾರಗಳ ಅವಧಿಯಲ್ಲಿ ಇಂಧನ ಇಲಾಖೆಯಲ್ಲಿ ನಡೆದಿರುವ ಎಲ್ಲ ಹಗರಣಗಳ ತನಿಖೆಗೆ ಬದ್ಧ. ಇಲಾಖೆಯಲ್ಲಿನ ತಪ್ಪುಗಳನ್ನು ಸರಿಪಡಿಸಿ, ಸುಧಾರಣೆಗೆ ಆದ್ಯತೆ ನೀಡಲಾಗುವುದು' ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಪ್ರಕಟಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸೋಲಾರ್ ಸೇರಿದಂತೆ ಹಿಂದಿನ ಅವಧಿಯಲ್ಲಿ ಯಾವುದಾದರೂ ಪ್ರಮಾದಗಳಾಗಿದ್ದರೆ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ತನಿಖೆಗೆ ಸಿದ್ಧ. ಈಗಾಗಲೇ ಇಲಾಖೆ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದ್ದು, ಮುಂದಿನ ವಾರ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು' ಎಂದು ತಿಳಿಸಿದರು. 

`ಜನಸ್ನೇಹಿ, ಉತ್ತಮ ಆಡಳಿತ, ಜನಪರ ಯೋಜನೆಗಳನ್ನು ತರಬೇಕೆಂಬುದೇ ನಮ್ಮ ಗುರಿ. ಇದಕ್ಕಾಗಿ ನಾನು ನನ್ನದೇ ಆದ ಯೋಜನೆಗಳನ್ನು ಇಟ್ಟುಕೊಂಡಿದ್ದೇನೆ. ಇಲಾಖೆಯಲ್ಲಿ ಒಂದಿಷ್ಟು ಮಾರ್ಪಾಡುಗಳನ್ನು ಮಾಡುವ ಉದ್ದೇಶವಿದೆ. ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವುದು, ಟ್ರಾನ್ಸ್‍ಫಾರ್ಮರ್‍ಗಳ ಸುಧಾರಣೆ ತರುವ ಮೂಲಕ ಇಲಾಖೆಯು ಜನಸ್ನೇಹಿ ಎಂಬುದನ್ನು ಸಾಬೀತು ಮಾಡಬೇಕು' ಎಂದು ಸುನೀಲ್ ಕುಮಾರ್ ಹೇಳಿದರು.

`ಇಲಾಖೆಯಲ್ಲಿ ಲೈನ್‍ಮ್ಯಾನ್‍ಗಳಿಂದ ಹಿಡಿದು ವ್ಯವಸ್ಥಾಪಕ, ನಿರ್ದೇಶಕರವರೆಗೂ ಇದ್ದಾರೆ. ಇದೊಂದು ಅತ್ಯಂತ ಮಹತ್ವದ ಇಲಾಖೆಯಾಗಿರುವುದರಿಂದ ಅನೇಕ ಸುಧಾರಣೆಗಳನ್ನು ತರಬೇಕು. ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸುವ ಚಿಂತನೆ ನಮ್ಮ ಮುಂದೆ ಇಲ್ಲ. ಈ ಬಗ್ಗೆ ಯಾರು ಊಹಾಪೋಹಗಳನ್ನು ನಂಬಬಾರದು' ಎಂದು ಸುನೀಲ್ ಕುಮಾರ್ ಇದೇ ವೇಳೆ ಮನವಿ ಮಾಡಿದರು.

ಹೆಸರು ಬದಲಾವಣೆ ಚರ್ಚೆಯಾಗಲಿ: `ಸರಕಾರ ಕೊಡುವ ಅನುದಾನದಲ್ಲಿ ಯಾವುದೋ ರಾಜಕೀಯ ವ್ಯಕ್ತಿಗಳ ಹೆಸರನ್ನು ಕ್ಯಾಂಟೀನ್‍ಗಳನ್ನು ಇರಬೇಕೊ ಅಥವಾ ಬೇಡವೋ ಎಂಬುದನ್ನು ರಾಜ್ಯದ ಜನತೆಯೇ ತೀರ್ಮಾನಿಸಲಿದೆ. ನಾನು ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾವಣೆ ಮಾಡಬೇಕು-ಬೇಡ ಎಂಬುದರ ಬಗ್ಗೆ ವಿವಾದ ಸೃಷ್ಟಿಸುವುದಿಲ್ಲ. ಜನರ ಅಭಿಪ್ರಾಯದಂತೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ನಾಮಕರಣ ಮಾಡುವುದಕ್ಕೆ ವಿರೋಧ ಏಕೆ? ಎಂದು ಅವರು ಪ್ರಶ್ನಿಸಿದರು.

`ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ. ನಾವು ಅವರ ಅಭಿಪ್ರಾಯದಂತೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮರುನಾಮಕರಣ ಮಾಡಿದರೆ ಬೇರೆ ಪಕ್ಷದವರು ಏಕೆ ವಿರೋಧ ವ್ಯಕ್ತಪಡಿಸಬೇಕು, ಸರಕಾರ ಕೊಡುವ ಅನುದಾನದಲ್ಲಿ ನಡೆಯುವುದಕ್ಕೆ ರಾಜಕೀಯ ವ್ಯಕ್ತಿಗಳ ಹೆಸರಿಡುವುದು ಸೂಕ್ತವಲ್ಲ' ಎಂದು ಸುನೀಲ್ ಕುಮಾರ್ ಹೇಳಿದರು.

`ಏಕಾಏಕಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಬೇಕೆಂಬ ಉದ್ದೇಶವಿಲ್ಲ. ಜನರ ಅಭಿಪ್ರಾಯವನ್ನೇ ನಾವೂ ವ್ಯಕ್ತಪಡಿಸಿದ್ದೇವೆ. ಹಿಂದೆ ವಾಜಪೇಯಿ ಸರಕಾರದ ಅವಧಿಯಲ್ಲಿ ಚತುಷ್ಪಥ ರಸ್ತೆ ಯೋಜನೆಯನ್ನು ಮಾಡಿದಾಗ ಹೆದ್ದಾರಿಗಳಲ್ಲಿ ಹಾಕಿದ್ದ ಬೋರ್ಡ್‍ಗಳನ್ನು ಬದಲಾಯಿಸಲು ಅಂದಿನ ಸರಕಾರ ವಿಶೇಷ ಅನುದಾನವನ್ನು ಕೊಟ್ಟಿತ್ತು. ನಮಗೆ ಕಾಂಗ್ರೆಸ್‍ನವರಿಂದ ಸಂಸ್ಕೃತಿ ಕಲಿಯುವ ಅಗತ್ಯವಿಲ್ಲ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News