ಸಿ.ಟಿ ರವಿ ನಮ್ಮ ವಿಚಾರದಲ್ಲಿ ಪೂರ್ವಗ್ರಹ ಪೀಡಿತರು: ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ

Update: 2021-08-13 13:00 GMT

ಬೆಂಗಳೂರು: `ನಾನು ಸಚಿವ ಸ್ಥಾನ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದೇನೆಂಬುದು ಸುಳ್ಳು. ಅದೀನ ಅಪ್ರಸ್ತುತ. ನಾನು ಆ ಕುರಿತು ಏನನ್ನೂ ಮಾತನಾಡುವುದಿಲ್ಲ. ಈಗ ನನಗೆ ನಮ್ಮ ಕ್ಷೇತ್ರದ ಅಭಿವೃದ್ಧಿ ಮತ್ತು ನೆರವು ಅಷ್ಟೇ ಮುಖ್ಯ. ಅದು ಅಲ್ಲದೆ, ಸಿ.ಟಿ.ರವಿ ಸಚಿವರಾಗಿದ್ದ ಅವಧಿಯಲ್ಲಿ ತಮ್ಮ ಕ್ಷೇತ್ರಕ್ಕೆ ಅನುದಾನ ಪಡೆದುಕೊಂಡಿದ್ದಾರೆ. ಅದೇ ರೀತಿಯಲ್ಲಿ ಮೂಡಿಗೆರೆ ಕ್ಷೇತ್ರಕ್ಕೆ ಅನುದಾನ ಕೊಡಿಸಿದ್ದರೆ ಅವರು ದೊಡ್ಡವರಾಗುತ್ತಿದ್ದರು. ಅವರು ನಮ್ಮ ವಿಚಾರದಲ್ಲಿ ಪೂರ್ವಗ್ರಹ ಪೀಡಿತರು' ಎಂದು ಕುಮಾರಸ್ವಾಮಿ, ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಶುಕ್ರವಾರ ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, `ನನಗೆ ಯಾವುದೇ ರೀತಿಯ ಆಸೆಗಳಿಲ್ಲ. ಯಾರ ಬಳಿಯೂ ನಾವು ಸಚಿವ ಸ್ಥಾನಕ್ಕಾಗಿ ಹೋಗಿ ಕೇಳಿಕೊಂಡಿಲ್ಲ. ಜನರಿಗಾಗಿ ನಾನು ನಿನ್ನೆ ಹೋರಾಟ ಮಾಡಿದ್ದೇನೆ. ಅವರಿಗಾಗಿ ಈ ಕೆಲಸ ಮಾಡುತ್ತಿದ್ದೇನೆ. ಅನುದಾನ ಕೊಡಿ ಎಂದು ನಾವು ಕೇಳಿದ್ದೇವೆ. ಇಲ್ಲವಾದರೆ ನಾವು ನಮ್ಮ ಕ್ಷೇತ್ರದಲ್ಲಿ ಅಪಹಾಸ್ಯಕ್ಕೆ ಗುರಿಯಾಗುತ್ತೇವೆ ಎಂದ ಅವರು, ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಮೇಲೆ ಭರವಸೆ ಇಟ್ಟಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುವ ನಿರೀಕ್ಷೆ ಇದೆ' ಎಂದು ಅವರು ಭರವಸೆ ವ್ಯಕ್ತಪಡಿಸಿದರು.

`ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಏಕೈಕ ನಾಯಕರು. ಅದಕ್ಕೆ ಅವರನ್ನು ನಾನು ಭೇಟಿ ಮಾಡಿದ್ದೇನೆ. ಪ್ರತಿವರ್ಷ ಅವರ ಹುಟ್ಟುಹಬ್ಬದಿನ ಅವರಿಗೆ ವಿಶ್ ಮಾಡುತ್ತೇನೆ. ಪ್ರತಿ ವರ್ಷವು ಹೋಗುತ್ತೇನೆ. ಕಳೆದ ಬಾರಿಯೂ ಹೋಗಿದ್ದೆ. ಆಗ ತೊಂದರೆ ಇರಲಿಲ್ಲ, ಈಗ ಏಕೆ ಸಮಸ್ಯೆಯಾಗಿದೆ. ಅವರಿಗೆ ಪ್ರತಿ ರಾಜಕಾರಣಿಗಳು ಶುಭ ಕೋರಿದ್ದಾರೆ. ಅದರಲ್ಲಿ ತಪ್ಪೇನು' ಎಂದು ಸಿದ್ದರಾಮಯ್ಯರ ಭೇಟಿಯನ್ನು ಕುಮಾರಸ್ವಾಮಿ ಸಮರ್ಥಿಸಿಕೊಂಡರು.

`ಕಾಂಗ್ರೆಸ್-ಜೆಡಿಎಸ್ ಪಕ್ಷದಿಂದ ವಲಸಿಗರು ಬಂದಿಲ್ಲವೆಂದಿದ್ದರೆ ನಮ್ಮ ಸರಕಾರವೇ ಬರುತ್ತಿರಲಿಲ್ಲ. ಅವರು ಬಂದಿದ್ದು, ನಮಗೆ ಖುಷಿ ತಂದಿದೆ. ಈಗ ನಮ್ಮ ಸರಕಾರ ಅಧಿಕಾರದಲ್ಲಿದೆ. ಅದೇ ನಮಗೆ ಖುಷಿಯ ವಿಚಾರ. ಆದರೆ, ಕ್ಷೇತ್ರಗಳ ಅಭಿವೃದ್ಧಿ ಮಾಡಲು ಸಹಾಯಕ ಆಗುತ್ತದೆ ಎಂದು ಮೂರು ವರ್ಷಗಳಿಂದ ಕಾಯುತ್ತಿದ್ದೇನೆ. ಆದರೆ, ಯಾರೂ ನಮ್ಮ ಕೂಗು ಕೇಳಿಸಿಕೊಳ್ಳುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಹೋರಾಟಕ್ಕೆ ಇಳಿದೆ. ಸ್ಪಂದಿಸದಿದ್ದರೆ ನನ್ನ ಹೋರಾಟ ನಿಲ್ಲದು' ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News